ಮಕ್ಕಳ ಉತ್ತಮ ಭವಿಷ್ಯಕ್ಕೆ ಒಟ್ಟಾಗಿ ಶ್ರಮಿಸಿ: ಕಾಂತರಾಜ್
ಕ.ಪ್ರ.ವಾರ್ತೆ, ಬೀರೂರು, ಜು.24
ಮಕ್ಕಳ ಉತ್ತಮ ಭವಿಷ್ಯ ಹಾಗೂ ಸಂಘದ ಬಲವರ್ಧನೆಗಾಗಿ ಸಮುದಾಯದ ಎಲ್ಲರೂ ಒಟ್ಟಾಗಿ ಶ್ರಮಿಸಬೇಕಿದೆ ಎಂದು ದೇವಾಂಗ ಸಮಾಜದ ಗೌರವಾಧ್ಯಕ್ಷ ಅರೇಕಲ್ ಕಾಂತರಾಜ್ ಹೇಳಿದರು.
ಅವರು ಬೀರೂರು ಪಟ್ಟಣದ ಶ್ರೀರಾಮ ಬನಶಂಕರಿ ದೇವಾಲಯದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ಮಕ್ಕಳನ್ನು ಪ್ರೋತ್ಸಾಹಿಸುವ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಭವಿಷ್ಯ ರೂಪಿಸಬೇಕಾದ ಪೋಷಕರು ಕಾಳಜಿಯಿಂದ ವಿದ್ಯಾರ್ಥಿ ಜೀವನ ಹಾಗೂ ಭವಿಷ್ಯದ ಬದುಕಿನ ಬಗ್ಗೆ ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು ಎಂದರು.
ಸಮಾಜದ ಪ್ರಗತಿಗೆ ಶ್ರಮಿಸಿ: ನೌಕರರ ಸಂಘದ ಗೌರವಾಧ್ಯಕ್ಷ ಟಿ.ಎನ್. ಲೋಕೇಶಪ್ಪ ಮಾತನಾಡಿ, ಸಮಾಜದಲ್ಲಿ ಆರ್ಥಿಕವಾಗಿ ಸದೃಢರಾದವರು ಸಮಾಜದ ಪ್ರಗತಿಗೆ ಹೆಚ್ಚಿನ ಕೊಡುಗೆ ನೀಡುವುದರ ಜೊತೆ ಎಲ್ಲ ಕ್ಷೇತ್ರಗಳಲ್ಲಿ ಸಮಾನ ಪ್ರಾತಿನಿಧ್ಯ ಪಡೆಯಲು ಹೆಚ್ಚು ಕಾಳಜಿ ವಹಿಸಬೇಕು ಈ ನಿಟ್ಟಿನಲ್ಲಿ ನೌಕರರ ಸಂಘ ಶ್ರಮಿಸಲಿದೆ ಎಂದರು.
ದೇವಾಂಗ ನೌಕರರ ಸಂಘದ ಅಧ್ಯಕ್ಷ ಜಿ. ಕೃಷ್ಣಮೂರ್ತಿ ಸಂಘದ ಕಾರ್ಯ ಚಟುವಟಿಕೆ ಹಾಗು ಅಭಿವೃದ್ಧಿಯ ಅಗತ್ಯತೆ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಾಂಗ ಸಮಾಜದ ಅಧ್ಯಕ್ಷ ಎಲ್. ಕೃಷ್ಣಮೂರ್ತಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ನಿವೃತ್ತ ನೌಕರರಾದ ಪಿ.ಸಿ. ಗೋವಿಂದಪ್ಪ ಹಾಗು ಎ.ಜಿ. ರಾಮಚಂದ್ರಪ್ಪನವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಡಿ.ಆರ್.ಯತೀಶ್, ಅರೇಕಲ್ ಪ್ರಕಾಶ್, ಡಾ. ಎ.ಸಿ. ಜಗದೀಶ್, ರವೀಂದ್ರ ಪ್ರಕಾಶ್ ಮಂಜುನಾಥ್, ಸುರೇಶ್ ಬಾಬು, ವಿಜಯಕುಮಾರ್, ನಾರಾಯಣ್, ಪುಷ್ಪಲತಾ, ಶಂಕರಮ್ಮ, ಕುಸುಮ ಉಪಸ್ಥಿತರಿದ್ದರು.