ನಿರ್ಲಕ್ಷ್ಯ: ಧರಣಿ ಎಚ್ಚರಿಕೆ
ಚಿಕ್ಕಮಗಳೂರು: ವಸ್ತಾರೆಯಲ್ಲಿರುವ ದೂರವಾಣಿ ಕಚೇರಿಯಲ್ಲಿನ ತಾಂತ್ರಿಕ ದೋಷದಿಂದ ಇಲ್ಲಿನ ದೂರವಾಣಿ ಮತ್ತು ಹಲವು ಮೊಬೈಲ್ಗಳಲ್ಲಿ ನ್ಯೂನತೆ ಕಂಡು ಬಂದಿದ್ದು ಅಧಿಕಾರಿಗಳು ಕೂಡಲೇ ಗಮನಹರಿಸಿ ದುರಸ್ತಿ ಪಡಿಸದಿದ್ದರೆ ಪ್ರತಿಭಟನೆ ದಾರಿ ಹಿಡಿಯಬೇಕಾಗುತ್ತದೆ ಎಂದು ಕೂದುವಳ್ಳಿ ಬಿಎಸ್ಎನ್ಎನ್ ಅಧ್ಯಕ್ಷ ವಿ.ಪಿ. ಕೃಷ್ಣೇಗೌಡ ಎಚ್ಚರಿಸಿದ್ದಾರೆ.
ಕಳೆದ 15 ದಿನಗಳಿಂದ ಈ ಸುತ್ತಾಮುತ್ತಾ ಪ್ರದೇಶದ ಗ್ರಾಮಸ್ಥರು ಲ್ಯಾಂಡ್ ಫೋನ್ ಮತ್ತು ಮೊಬೈಲ್ಗಳಿಗೆ ಸರಿಯಾದ ಸಂಪರ್ಕ ಲಭ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ದೂರು ಸಲ್ಲಿಸಲು ವಸ್ತಾರೆಯಲ್ಲಿರುವ ಕಚೇರಿಗೆ ಅನೇಕ ಬಾರಿ ತೆರಳಿದರು ಅಧಿಕಾರಿಗಳಾಗಲಿ, ನೌಕರರಾಗಲಿ ಕಣ್ಣಿಗೆ ಬೀಳದೆ ಇದ್ದು ಕೆಲವೊಮ್ಮೆ ಸಿಕ್ಕಿದ ಸಂದರ್ಭದಲ್ಲಿ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಳೆಗಾಲವಾದ್ದರಿಂದ ಟೆಲಿಫೋನ್ ಅಗತ್ಯತೆ ಗ್ರಾಮಸ್ಥರಿಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಸಮಸ್ಯೆ ಬಗೆಹರಿಸದಿದ್ದರೆ ಅನಿವಾರ್ಯವಾಗಿ ಬಿಎಸ್ಎನ್ಎನ್ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.