ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಡ್ತಿ ಶಿಕ್ಷಕರ ಸಮಸ್ಯೆ ಪರಿಹರಿಸಿ

Lingaraj Badiger
Updated On : 26 Jul 2013, 11:38 am

ಕ.ಪ್ರ.ವಾರ್ತೆ  ಚಿಕ್ಕಮಗಳೂರು  ಜು.25
ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗಳಿಗೆ ಬಡ್ತಿ ಹೊಂದಿರುವ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಶಿಕ್ಷಕರ ಜಿಲ್ಲಾ ಸಂಘದ ಪದಾಧಿಕಾರಿಗಳು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಅರ್ಹ ವಿದ್ಯಾರ್ಹತೆಯುಳ್ಳ ಶಿಕ್ಷಕರನ್ನು ಜಿಲ್ಲೆಯ ಸೇವಾ ಹಿರಿತನದ ಆಧಾರದ ಮೇಲೆ ಬಿ ಅಥವಾ ಸಿ ಸ್ಥಳಗಳಿಗೆ ಕೌನ್ಸೆಲಿಂಗ್ ಮೂಲಕ ಬಡ್ತಿ ನೀಡಲಾಗುತ್ತಿದೆ. ಬಡ್ತಿ ನಂತರ ಪ್ರೌಢಶಾಲಾ ಮುಖ್ಯ ಶಿಕ್ಷಕ ಹುದ್ದೆಗೆ ಹಾಗೂ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಹುದ್ದೆಗೆ ಬಡ್ತಿ ನೀಡುವಾಗ ಪ್ರೌಢಶಾಲೆಗೆ ಬಡ್ತಿ ನೀಡಿದ ದಿನಾಂಕದಿಂದ ಸೇವಾ ಜೇಷ್ಠತೆಯನ್ನು ಪರಿಗಣಿಸಲಾಗುತ್ತಿದೆ.
 ಇದರಿಂದಾಗಿ  ಅಗತ್ಯ ವಿದ್ಯಾರ್ಹತೆ ಹಾಗೂ ಸೇವಾ ಅನುಭವವಿದ್ದರೂ ಸಹ ಪ್ರೌಢಶಾಲೆಯ ಸಹ ಶಿಕ್ಷಕರಾಗಿಯೇ ನಿವೃತ್ತಿ ಹೊಂದುವಂತಾಗಿದೆ. ಆದ್ದರಿಂದ ನಮ್ಮ ಸೇವಾ ಹಿರಿತನಕ್ಕೆ ಪ್ರಾಥಮಿಕ ಶಾಲಾ ಸೇವೆಗೆ ಸೇರಿದ ದಿನಾಂಕವನ್ನೇ ಪರಿಗಣಿಸಿ ಸಹಕರಿಸಬೇಕು. ಈ ಸಂದರ್ಭದಲ್ಲಿ ನಮ್ಮ ಸಂಘದ ಪದಾಧಿಕಾರಿಗಳಿಗೂ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಷರತ್ತಿನಿಂದ ವಿನಾಯ್ತಿ ನೀಡಿ: ಪ್ರಾಥಮಿಕ ಶಾಲೆಯಿಂದ ಬಡ್ತಿ ನೀಡುವಾಗ ಸಿ ಅಥವಾ ಬಿ ವಲಯದ ಪ್ರೌಢಶಾಲೆಗಳಿಗೆ ಮಾತ್ರ ನಮ್ಮನ್ನು ಪರಿಗಣಿಸಲಾಗುತ್ತಿದ್ದು, ಸಾಮಾನ್ಯ ವರ್ಗಾವಣೆಯಡಿಯಲ್ಲಿ ನಾವು ಅದೇ ಶಾಲೆಯಲ್ಲಿ 3 ವರ್ಷಗಳ ಸೇವೆಯನ್ನು ಪೂರೈಸಿರಬೇಕು ಎಂಬ ಷರತ್ತನ್ನು ವಿಧಿಸಿರುವುದರಿಂದ ಕೇವಲ ಒಂದು ವಾರ್ಷಿಕ ಬಡ್ತಿಯನ್ನು ಮಾತ್ರ ಪಡೆದು ಅದೇ ಶಾಲೆಯಲ್ಲಿ ಮುಂದುವರೆಯಬೇಕಾಗಿದೆ. ಆದ್ದರಿಂದ ಬಡ್ತಿ ಹೊಂದಿದ ಶಿಕ್ಷಕರಿಗೆ ಈ ಷರತ್ತಿನಿಂದ ವಿನಾಯ್ತಿ ನೀಡಬೇಕು.
10,15, 20, 25 ಹಾಗೂ 30 ವರ್ಷಗಳ, ಕಾಲಮಿತಿ ಬಡ್ತಿಯನ್ನು ನೀಡುವಾಗ ಒಂದೇ ಹುದ್ದೆಯಲ್ಲಿ ಒಂದೇ ಜಿಲ್ಲೆಯಲ್ಲಿ ಅಥವಾ ವಿಭಾಗದಲ್ಲಿ ಇರಬೇಕು ಎಂಬ ಈಗಿರುವ ಷರತ್ತನ್ನು ಸಡಿಲಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರಸ್ತುತ 2001ರ ಜನಗಣತಿಯ ಆಧಾರದಲ್ಲಿ ಎ. ಬಿ. ಸಿ. ಮತ್ತು ಡಿ ಎಂದು ಜನವಸತಿ ಪ್ರದೇಶಗಳಾಗಿ ವಿಂಗಡಿಸಿ ಕ್ರಮವಾಗಿ ಮೂಲವೇತನದ  ಶೇ.30, ಶೇ.16, ಶೇ.10 ಹಾಗೂ ಶೇ.7 ಮನೆಬಾಡಿಗೆ ಭತ್ಯೆ ನೀಡಲಾಗುತ್ತಿದೆ.
ಇದನ್ನು 2011ರ ಜನಗಣತಿ ಆಧಾರದ ಮೇಲೆ ನಿಗದಿಗಳಿಸುವುದು ಈ ವರದಿ ಜಾರಿಗೆ ಬಂದ ದಿನಾಂಕದಿಂದ ಶಿಕ್ಷಕರಿಗೆ ಇದರ ಆರ್ಥಿಕ ಸೌಲಭ್ಯವನ್ನು ನೀಡಬೇಕು.
ತಾರತಮ್ಯ ಸರಿದೂಗಿಸಿ: ಆರ್ಥಿಕ ಸೌಲಭ್ಯಗಳನ್ನು ನೀಡಲು ಡಿ ಪ್ರದೇಶದ ನೌಕರರೆಂದು, (ಶೇ.7 ಹೆಚ್.ಆರ್.ಎ.) ವರ್ಗಾವಣೆ ಸಮಯದಲ್ಲಿ ನಗರದ ಬಿ ಪ್ರದೇಶವೆಂದು (1.5 ಅಂಕ) ದ್ವಂದ್ವ ನೀತಿ ಅನುಸರಿಸಲಾಗುತ್ತಿದೆ, ಈ ತಾರತಮ್ಯವನ್ನು ಸರಿದೂಗಿಸಬೇಕು.
ಪ್ರಸ್ತುತ ಬೆಂಗಳೂರು ನಗರ ಜಿಲ್ಲೆಯಲ್ಲಿಯೇ ಇರುವ ಕೆಲವು ಪ್ರದೇಶಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿಲ್ಲವೆಂಬ ಕಾರಣಕ್ಕೆ ಕೇವಲ ಶೇ.7 ಮನೆ ಬಾಡಿಗೆ ನೀಡುತ್ತಿದ್ದು, ಈ ನೌಕರರಿಗೂ ಶೇ.30ರಷ್ಟು ಮನೆಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆಯನ್ನು ವಿಸ್ತರಿಸಬೇಕು. ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಬಡ್ತಿ ನೀಡುವಾಗ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಅಂತರ್ಜಾಲದಲ್ಲಿ ಬಡ್ತಿ ಪೂರ್ವದಲ್ಲಿ ಪ್ರಕಟಿಸಿ ಆಕ್ಷೇಪಣೆಗಳಿಗೆ ಅವಕಾಶ ನೀಡಿ, (ವಿಷಯವಾರು) ಕೌನ್ಸೆಲಿಂಗ್ ನಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವಂತೆ ವ್ಯವಸ್ಥೆಯಾಗಬೇಕು.
ಬೇಡಿಕೆಗಳಿಗೆ ಸ್ಪಂದಿಸಿ: ಶಿಕ್ಷಣ ಸಂಯೋಜಕ ಹುದ್ದೆ, ಪಧವೀಧರ ಮುಖ್ಯ ಶಿಕ್ಷಕ ಹುದ್ದೆ, ಹಾಗೂ ಅರ್.ಎಂ.ಎಸ್.ಎ. ಅಡಿಯಲ್ಲಿ ಬಿ.ಆರ್.ಪಿ. ಹುದ್ದೆಗಳಿಗೆ ಉತ್ತಮ ಸೇವಾ ಅನುಭವವನ್ನು ಹೊಂದಿರುವ ತಮಗೆ ಆದ್ಯತೆ ನೀಡಬೇಕು. ಪ್ರಸ್ತುತ ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳಿಂದ ಪ್ರೌಢಶಾಲೆಗಳಿಗೆ ಬಡ್ತಿ ಹೊಂದಿರುವ ಸುಮಾರು 15 ಸಾವಿರ ಸಹ ಶಿಕ್ಷಕರಿದ್ದು, ಹಲವಾರು ವರ್ಷಗಳಿಂದ ಇಲಾಖೆಯ ಹಲವಾರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರದಲ್ಲಿ ತಮಗೆ ನ್ಯಾಯ ಒದಗಿಸಬೇಕು. ಬೇಡಿಕೆಗಳಿಗೆ ಸಕಾರಾತ್ಮಕವಾದ ಪರಿಹಾರವನ್ನು ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗಳಿಗೆ ಬಡ್ತಿ ಹೊಂದಿರುವ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ಬಿ. ಮಹದೇವೇಗೌಡ, ಪ್ರಧಾನ ಕಾರ್ಯದರ್ಶಿ ಕುಂದೂರು ಅಶೋಕ್ ಹಾಗೂ ಗೌರವ ಅಧ್ಯಕ್ಷ ಬಸವರಾಜ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement