ಮನೆ ಮನೆ ಭೇಟಿ ನೀಡಿ ಲಾರ್ವಾ ಪತ್ತೆ
ಕ.ಪ್ರ.ವಾರ್ತೆ,ಕಡೂರು,ಜು.25
ತಾಲೂಕಿನಲ್ಲಿ 80 ಡೆಂಘೀ ಸೋಂಕಿತ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯಕರ್ತೆಯರಿಂದ ಮನೆ ಮನೆಗೆ ಭೇಟಿ ನೀಡಿ ಲಾರ್ವಾ ಪತ್ತೆ ಹಚ್ಚಿ ಜನರಿಗೆ ಅರಿವು ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಸ್.ಕೆ. ಪ್ರಭು ತಿಳಿಸಿದರು.
ಪಟ್ಟಣದಲ್ಲಿ ತಹಸೀಲ್ದಾರ್ ಎನ್.ಎಸ್. ಶಾರದಾಂಭ ಮನೆ ಮನೆಗೆ ಭೇಟಿ ನೀಡಿ ಲಾರ್ವಾ ಪತ್ತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜನರಲ್ಲಿ ಡೆಂಘೀ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯಿಂದ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.
ತಾಲೂಕಿನ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪ್ರತೀ ಗ್ರಾಮಗಳ ಜನರಲ್ಲಿ ಪರಿಸರ ಸಂರಕ್ಷಣೆ ಮತ್ತು ಗುಂಡಿಗಳಲ್ಲಿ ನೀರು ನಿಲ್ಲದಂತೆ, ಟೈರುಗಳಲ್ಲಿ, ಎಳ ನೀರಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ಮತ್ತು ಡ್ರಂಗಳಲ್ಲಿ ನೀರು ಸಂಗ್ರವನ್ನು ಬದಲಿಸಲು ಮ್ತು ಮುಚ್ಚಳ ಮುಚ್ಚಿ ಸೊಳ್ಳೆಗಳು ಬಾರದಂತೆ ಕ್ರಮ ವಹಿಸಲು ಜನರಿಗೆ ತಿಳಿವಳಿಕೆ ನೀಡಲಾಗುತ್ತಿದೆ ಎಂದು ಹೇಳಿದರು.
4 ದಿನಗಳ ಕಾರ್ಯಕ್ರಮ: ಲಾರ್ವಾಗಳನ್ನು ಪತ್ತೆ ಹಚ್ಚಿ ನಾಶಗೊಳಿಸುವ ಕುರಿತು ತಿಳಿಸಲಾಗುತ್ತಿದೆ. ತಾಲೂಕಾದ್ಯಂತ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಉಪ ಕೇಂದ್ರಗಳ ಆರೋಗ್ಯ ಕಾರ್ಯಕರ್ತೆಯರಿಂದ ಪ್ರತೀ ಮನೆ ಮನೆಗೆ ಭೇಟಿ ನೀಡಿ ಲಾರ್ವಾ ಪತ್ತೆ ಕಾರ್ಯ ನಡೆಸಲಾಗುತ್ತಿದೆ.
ಪಟ್ಟಣದಲ್ಲಿ ಹಲವು ಹಂತಗಳಲ್ಲಿ ಲಾರ್ವಾ ಪತ್ತೆ ಸರ್ವೆ ಕಾರ್ಯ ನಡೆಸಲಾಗುತ್ತಿದ್ದು, ನಾಲ್ಕು ದಿನಗಳ ಕಾಲ ಆರೋಗ್ಯ ಕಾರ್ಯಕರ್ತೆಯರಿಂದ ಮನೆ ಮನೆ ಭೇಟಿ ನೀಡಿ ಜನರಿಗೆ ಸೊಳ್ಳೆಗಳ ನಿಯಂತ್ರಣ ಕುರಿತು ಮಾಹಿತಿ ನೀಡುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಪಟ್ಟಣದಲ್ಲಿ 9,222 ಮನೆಗಳಿದ್ದು, ಪ್ರತಿ ಮನೆಗಳಿಗೆ ಭೇಟಿ ನೀಡಿ ಡ್ರಂಗಳ ನೀರು ಬದಲಿಸುವಂತೆ, ತೊಟ್ಟಿಗಳನ್ನು ಮುಚ್ಚುವಂತೆ ಮತ್ತು ಅಕ್ಕಪಕ್ಕದಲ್ಲಿ ಗುಂಡಿಗಳನ್ನು ಮುಚ್ಟುವಂತೆ ಮತ್ತು ತ್ಯಾಜ್ಯ ವಸ್ತುಗಳ ದೂರಕ್ಕೆ ಹಾಕುವಂತೆ ತಿಳಿವಳಿಕೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.