ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ
ಕ.ಪ್ರ.ವಾರ್ತೆ,ಮೂಡಿಗೆರೆ,ಜು.25
ರೋಟರಿ ಸಂಸ್ಥೆ ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ಹೊಂದಿದ್ದು, ಸ್ಥಳೀಯ ಸಮಸ್ಯೆ ಗಮನದಲ್ಲಿಟ್ಟುಕೊಂಡು ಹತ್ತು ಹಲವು ಉತ್ತಮ ಕಾರ್ಯಕ್ರಮ ನಡೆಸುವುದು ನಮ್ಮ ಗುರಿಯಾಗಿದೆ ಎಂದು ರೋಟರಿ ವಲಯದ ಮಾಜಿ ರಾಜ್ಯಪಾಲ ಎ.ಎಸ್. ಎನ್ ಹೆಬ್ಬಾರ್ ತಿಳಿಸಿದರು.
ಪಟ್ಟಣದ ಜೇಸಿ ಭವನದಲ್ಲಿ ಮೂಡಿಗೆರೆ ರೋಟರಿ ಸಂಸ್ಥೆ ಪದಾಧಿಕಾರಿ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮೊಬೈಲ್ ಕಂಪ್ಯೂಟರ್ ಮತ್ತು ಟೆಲಿವಿಷನ್ಗಳಿಂದ ಇಂದಿನ ಯುವ ಪೀಳಿಗೆ ಹಾದಿ ತಪ್ಪುತ್ತಿದ್ದು, ಹೇಳುವವರು ಕೇಳುವವರೂ ಇಲ್ಲದ ಪರಿಸ್ಥಿತಿ ಒದಗಿ ಬಂದಿದೆ. ಯುವ ಪಿಳಿಗೆಗೆ ಸರಿಯಾದ ಮಾರ್ಗದರ್ಶನ ಮಾಡುವುದರೊಂದಿಗೆ ಉತ್ತಮ ಪ್ರಜೆಯನ್ನಾಗಿಸುವುದು ಪೋಷಕರು, ಶಿಕ್ಷಕರು ಹಾಗೂ ಸಂಘ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ ಎಂದರು.
ಸೇವಾ ಕಾರ್ಯ: ರೋಟರಿ ಉಪ ರಾಜ್ಯಪಾಲ ಬಿ.ಎನ್. ರಮೇಶ್ ಮಾತನಾಡಿ, ಸಮಾಜದಲ್ಲಿ ಹಲವು ಉತ್ತಮ ಸೇವಾ ಕಾರ್ಯಕ್ರಮದ ಮೂಲಕ ಜನಸೇವೆಯಲ್ಲಿ ರೋಟರಿ ಸಂಸ್ಥೆ ಗುರುತಿಸಿಕೊಂಡಿದೆ.
ಮೂಡಿಗೆರೆ ರೋಟರಿ ಸಂಸ್ಥೆ ವತಿಯಿಂದ ಸಾರ್ವಜನಿಕ ಚಿತಗಾರ, ಬಿದರಹಳ್ಳಿಯಲ್ಲಿ ಗ್ರಂಥಾಲಯ ತೆರೆಯಲಾಗಿದ್ದು, ಪಲ್ಸ್ ಪೋಲಿಯೋ, ನೇತ್ರ ಚಿಕಿತ್ಸೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ನೂತನ ಅಧ್ಯಕ್ಷರಾಗಿ ಬಿ.ಎಲ್. ಪ್ರಭಾಕರ್, ಕಾರ್ಯದರ್ಶಿಯಾಗಿ ಆಧುನಿಕ್ ಎಂಪಿ ಪ್ರಮಾಣ ವಚನ ಸ್ವೀಕರಿಸಿ ತಮ್ಮ ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸುವುದಾಗಿ ತಿಳಿಸಿದರು.
ಮಾಜಿ ಅಧ್ಯಕ್ಷ ರೋಹನ್ ವಿಜೇಂದ್ರ ಅವರು ಪ್ರಭಾಕರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ವಿಭಾಗಿಯ ವ್ಯವಸ್ಥಾಪಕ ಬಿ.ಆರ್.ಯತೀಶ್, ಸಿ.ಬಿ. ಆನಂದ್, ಸುರೇಶ್ ಚಂದ್ರ ದತ್ತ, ಬಿ.ಸಿ. ಅಶ್ವತ್ಥ್, ಬಿ. ಬಸವರಾಜ್, ಎನ್.ಎನ್. ಪ್ರಸನ್ನಕುಮಾರ್, ಬಾಪು ದಿವ್ಯಪ್ರಸಾದ್, ಶ್ರೀಕಂಠೇಗೌಡ, ರಾಘವೇಂದ್ರ ಉಪಸ್ಥಿತರಿದ್ದರು.