ಮಳೆಗೆ 2 ಮನೆಗಳ ಕುಸಿತ
ಕ.ಪ್ರ.ವಾರ್ತೆ, ತರೀಕೆರೆ, ಜು.26
ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಶುಕ್ರವಾರ ಬೆಳಿಗ್ಗೆ ಎರಡು ಮನೆಗಳು ಕುಸಿದಿವೆ.
ಸಮೀಪದ ಬೇಲೇನಹಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ ತಮ್ಮ ಎನ್ನುವವರ ಮನೆ ಕುಸಿದು ಬಿದ್ದು ಮನೆಯಲ್ಲಿದ್ದ ಆಪಾರ ಪ್ರಮಾಣದ ಧವಸ ಧಾನ್ಯಗಳು ನಾಶವಾಗಿದೆ. ಗ್ರಾಮಸ್ಥರು ನೊಂದವರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಎ ರಂಗಾಪುರದಲ್ಲೂ ಬೆಳಗಿನ ಜಾವ ಹೆಂಚಿನ ಮನೆಯೊಂದು ಕುಸಿದಿದೆ.
ತಾಲೂಕಿನಲ್ಲಿ ಮಳೆ ಎಡಬಿಡದೆ ಮಲೆ ಸುರಿಯುತ್ತಿದೆ. ಸುರಿಯುತ್ತಿರುವ ಮಳೆಯಿಂದಾಗಿ ರೈತರು ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಲು ತುಂಬಾ ತೊಂದರೆಯಾಗಿದೆ. ತೀವ್ರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿ ಮತ್ತು ಬಹುತೇಕ ಸಂಪರ್ಕ ರಸ್ತೆಗಳು ಗುಂಡಿ ಹಾಗೂ ಕೆಸರಿನಿಂದ ತುಂಬಿಕೊಂಡಿವೆ.
ಜನ ಮತ್ತು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ. ಮಳೆ ಮತ್ತು ಗಾಳಿಯಿಂದಾಗಿ ಪಟ್ಟಣದ ಬಹುತೇಕ ಶಾಲಾ ಕೊಠಡಿಗಳು ಸಂಪೂರ್ಣ ಥಂಡಿಯಾಗಿದೆ. ಥಂಡಿ ಗಾಳಿ ಮತ್ತು ಸೀತದಲ್ಲೇ ಮಕ್ಕಳು ಶಾಲೆಯಲ್ಲಿ ಕೂತು ಪಾಠ ಕೇಳಬೇಕಾದ ಅನಿವಾರ್ಯತೆ ಒದಗಿದೆ.
ಇಂದು ಶಾಲೆಗಳಿಗೆ ರಜೆ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ಮುಂದುವರಿದಿದ್ದು, ಶನಿವಾರ ಮಲೆನಾಡಿನ ಕೊಪ್ಪ ತಾಲೂಕಿನ ಶಾಲೆಗಳಿಗೆ ರಜೆ ನೀಡಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಕೊಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ತಿಳಿಸಿದ್ದಾರೆ.
ಮಳೆಯಿಂದಾಗಿ ಮಲೆನಾಡಿನಲ್ಲಿ ಕಾಫಿ, ಅಡಕೆ, ಕಾಳುಮೆಣಸು ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳಿಗೂ ಹಾನಿ ಸಂಭವಿಸಿದೆ. ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪುರ ಮತ್ತು ಚಿಕ್ಕಮಗಳೂರು ತಾಲೂಕುಗಳಲ್ಲೂ ಮಳೆ ಬರುತ್ತಿದ್ದು, ಕಡೂರು ಮತ್ತು ತರೀಕೆರೆಯಲ್ಲಿ ಮಳೆ ಮುಂದುವರಿದಿದೆ.