ಮಳೆಗೆ ಬೆಳೆ ನಾಶ; ಪರಿಹಾರಕ್ಕೆ ಒತ್ತಾಯ
ಕ.ಪ್ರ.ವಾರ್ತೆ, ಮೂಡಿಗೆರೆ, ಜು.26
ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ, ಪ್ರಮುಖ ಬೆಳೆಗಳಾದ ಕಾಫಿ, ಏಲಕ್ಕಿ, ಅಡಕೆ, ಕಾಳುಮೆಣಸು ರೋಗಕ್ಕೆ ತುತ್ತಾಗುತ್ತಿದ್ದು. ಬತ್ತದ ಬೆಳೆ ನಾಶವಾಗುತ್ತಿದ್ದು, ಸರ್ಕಾರ ನೆರವಿಗೆ ಆಗಮಿಸಿ, ಬೆಳೆ ಪರಿಹಾರ ನೀಡಬೇಕೆಂದು ತಾಪಂ ಸರ್ವ ಸದಸ್ಯರ ಸಭೆ ಒಮ್ಮತದಿಂದ ನಿರ್ಣಯ ಅಂಗೀಕರಿಸಿತು.
ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಸರ್ವ ಸದಸ್ಯರ ಸಭೆ ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷ ಎಂ.ಎ. ಶೇಷಗಿರಿ ಮಾತನಾಡಿ, ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದ ಕೃಷಿಕರಿಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಪ್ರಮುಖ ಬೆಳೆ ಕಾಫಿ ಸಂಪೂರ್ಣ ನೆಲಕ್ಕೆ ಉದುರುವುದರೊಂದಿಗೆ, ಕೊಳೆ ರೋಗಕ್ಕೆ ತುತ್ತಾಗುತ್ತಿದೆ.
ಜೀವನ ಸಂಕಷ್ಟ: ಬೆಳೆಗಾರರ ಜೀವನ ಸಂಕಷ್ಟಕ್ಕೀಡಾಗಿದ್ದು, ಸರ್ಕಾರ ರೈತರ ನೆರವಿಗೆ ಬಂದು ಕನಿಷ್ಠ ಎಕರೆಗೆ ರು, 10,000 ಪರಿಹಾರ ನೀಡಬೇಕು. ಜೊತೆಗೆ ಮಳೆಯಿಂದ ಗ್ರಾಮೀಣ ಪ್ರದೇಶದ ರಸ್ತೆಗಳು ಹಾಳಾಗಿದ್ದು, ಸರ್ಕಾರ ತಾಲೂಕಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿ ಸರ್ಕಾರಿ ಕಟ್ಟಡಗಳು ಸೋರುತ್ತಿರುವ ಬಗ್ಗೆ ಸದಸ್ಯ ಎ.ಜೆ. ಸುಬ್ರಾಯ ಮಾತನಾಡಿ, ಪಟ್ಟಣದ ಪ್ರಥಮ ದರ್ಜೆ ಕಾಲೇಜು, ಪದವಿ ಪೂರ್ವ ಕಾಲೇಜು, ಬಣಕಲ್ ಪದವಿ ಪೂರ್ವ ಕಾಲೇಜಿನ ಕೊಠಡಿಗಳು ಸೋರುತ್ತಿದೆ.
ಕೊಡೆ ಹಿಡಿದು ಪಾಠ: ವಿದ್ಯಾರ್ಥಿಗಳು ಕೊಡೆ ಹಿಡಿದು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಕಿರಿಯ ಎಂಜಿನಿಯರ್ ವೆಂಕಟೇಶ್ ಮಳೆ ಎಡೆ ಬಿಡದೆ ಸುರಿಯುತ್ತಿರುವುದರಿಂದ ಬಹಳ ಕಟ್ಟಡಗಳು ಸೋರುತ್ತಿದೆ ಎಂದರು.
ಸದಸ್ಯ ರಂಜನ್ ಅಜಿತ್ ಕುಮಾರ್ ಪ್ರತಿಕ್ರಿಯಿಸಿ 20 ವರ್ಷ ಹಳೆಯದಾದ ಸ್ವಂತ ಕಟ್ಟಡಗಳು ಗಟ್ಟಿ ಮುಟ್ಟಾಗಿವೆ. ಆದರೆ ಸರ್ಕಾರಿ ಕಟ್ಟಡ ಒಂದೇ ವರ್ಷಕ್ಕೆ ಸೋರುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಕಾಡಾನೆ ಬಗ್ಗೆ ನಿರ್ಲಕ್ಷ್ಯ: ಕಾಡಾನೆ ಬಗ್ಗೆ ಅರಣ್ಯ ಇಲಾಖೆ ನಿರ್ಲಕ್ಯದ ಬಗ್ಗೆ ಸದಸ್ಯ ಎ.ಜೆ. ಸುಬ್ರಾಯ ಆರೋಪಿಸಿದರು. ಇದಕ್ಕೆ ಉತ್ತರಿಸಿದ ವಲಯ ಅರಣ್ಯಾಧಿಕಾರಿ ಸುದರ್ಶನ್, ಕಾಡಾನೆಗಳನ್ನು ಓಡಿಸಲು ಕ್ರಮ ತೆಗೆದುಕೊಂಡಿದ್ದು. ಹೇಮಾವತಿ ನದಿ ತುಂಬಿ ಹರಿಯುತ್ತಿರುವುದರಿಂದ ಆನೆಗಳು ನದಿಗೆ ಇಳಿದು ದಾಟಲು ಸಾಧ್ಯವಾಗದೆ ನದಿಯ ತೀರದಲ್ಲೆ ಸಾಗುತ್ತಿವೆ. ಮಳೆ ಕಡಿಮೆಯಾದಲ್ಲಿ ಅವುಗಳನ್ನು ಬೇರೆಡೆ ಕಳುಹಿಸಲು ಕ್ರಮ ಜರುಗಿಸುವುದಾಗಿ ತಿಳಿಸಿದರು. ಬೆಳೆ ಹಾನಿ ಬಗ್ಗೆ ಪರಿಹಾರಕ್ಕೆ ಸ್ಥಳದಲ್ಲೆ ಅರ್ಜಿಯನು ಸ್ವಿಕರಿಸಲಾಗುತ್ತಿದೆ ಎಂದರು.
ಸುಮಾ ಸುರೇಶ್, ನೇಪಾ ಆದಿತ್ಯ, ತಹಸೀಲ್ದಾರ್ ಎ.ವಿ. ರುದ್ರಪ್ಪಾಜೀರಾವ್, ಹರ್ಷಕುಮಾರ್, ಸದಸ್ಯರು ಇದ್ದರು.