ಮುಖ್ಯ ರಸ್ತೆಯಲ್ಲಿ ಗುಂಡಿ, ಹೊಂಡ: ಆಕ್ರೋಶ
ಬಾಳೆಹೊನ್ನೂರು: ಪಟ್ಟಣದ ಮುಖ್ಯ ರಸ್ತೆಯು ಎಲ್ಲೆಂದರಲ್ಲಿ ಹೊಂಡ ಗುಂಡಿಗಳು ಬಿದ್ದು ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ತಿರುಗಾಡದ ಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿನ ಬಸ್ ನಿಲ್ದಾಣದ ಸಮೀಪದಿಂದ ಜೇಸಿ ವೃತ್ತ ಸೇರಿದಂತೆ ಕೆಳಗಿನಪೇಟೆಯ ರೋಟರಿ ವೃತ್ತದವರೆಗೂ ರಸ್ತೆಯಲ್ಲಿ ತುಂಬಾ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ಮಳೆಗಾಲವಾದ ಕಾರಣ ಪಾದಾಚಾರಿಗಳು ರಸ್ತೆಯಲ್ಲಿ ಸಂಚರಿಸದಂತಾಗಿದೆ.
ಪಟ್ಟಣದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದೇ ಈ ಸಮಸ್ಯೆಗೆ ಕಾರಣವಾಗಿದ್ದು, ಮಳೆಯ ನೀರು ರಸ್ತೆ ಮೇಲೆ ಹರಿಯುವುದೇ ಈ ದುರವಸ್ಥೆಗೆ ಕಾರಣವಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ.
ಮಳೆಯ ನೀರಿನೊಂದಿಗೆ ತೊಳೆದು ಬರುವ ಕಲ್ಲು, ಮಣ್ಣು ಹಾಗೂ ಕಸಕಡ್ಡಿಗಳಿಂದ ರಸ್ತೆಯಲ್ಲಿ ಉಬ್ಬು ತಗ್ಗುಗಳಾಗಿದ್ದು, ತಿರುಗಾಡಲು ಸಹ ಇನ್ನೂ ದುಸ್ತರವಾಗಿದೆ. ಜೋರಾಗಿ ಮಳೆ ಬಂದಾಗ ರಸ್ತೆಗಳೆಲ್ಲಾ ಹಳ್ಳದಂತಾಗಿ ಮಾರ್ಪಾಡಾಗಿ ವಾಹನ ಸವಾರರು ಗುಂಡಿಗಳನ್ನು ಅರಿಯದೇ ಹೊಂಡಕ್ಕೆ ಬೀಳುವುದು ಮಾಮೂಲಿಯಾಗಿದೆ.
ರಸ್ತೆಯೆಲ್ಲಾ ನೀರಿನಿಂದ ಆವೃತವಾಗಿರುವುದರಿಂದ ಪಾದಚಾರಿಗಳು ಸೇರಿದಂತೆ ದಿನ ನಿತ್ಯ ಸಂಚರಿಸುವ ವಿದ್ಯಾರ್ಥಿಗಳು ಕೊಳಚೆ ನೀರಿನ ಸ್ನಾನ ಮಾಡುವುದು ಮಾಮೂಲಿಯಾಗಿದೆ. ಇದರಿಂದಾಗಿ ಪ್ರತಿದಿನ ಸಂಚರಿಸುವ ಎಲ್ಲಾ ಸಾರ್ವಜನಿಕರಿಗೂ ತೊಂದರೆ ಆಗಿದೆ.