ರಾಜಕಾರಣ ದೇಶ ಕಟ್ಟುವ ಸಾಧನ: ರವಿ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಜು.27
ಬಿಜೆಪಿ ಪಕ್ಷಕ್ಕೆ ಯುವಕರು ಅಧಿಕಾರ ಮತ್ತು ಹಣಕ್ಕಾಗಿ ಬಂದವರಲ್ಲ. ಜನರ ಧ್ವನಿಯಾಗಿ ಕೆಲಸ ಮಾಡಲು ಪಕ್ಷ ಸೇರಿದ್ದಾರೆ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ನಗರದ ಪಾಂಚಜನ್ಯ ಕಚೇರಿಯಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಆಲ್ದೂರು ಮಂಡಲ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾದ ಮಂಜುನಾಥ್ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಪಕ್ಷದಲ್ಲಿ ಕಾರ್ಯಕರ್ತರು ಹೆಚ್ಚಿನ ಶ್ರಮ ಹಾಕಿ ದುಡಿಯಬೇಕು. ಪಕ್ಷ ನಿಷ್ಠೆ ಮತ್ತು ಪರಿಶ್ರಮದಿಂದ ಮೇಲೆ ಬರಬಹುದು. ರಾಜಕಾರಣ ದೇಶ ಕಟ್ಟಲು ಇರುವ ಸಾಧನ. ಯುವಶಕ್ತಿ ಅದನ್ನು ಬಳಸಿಕೊಂಡು ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಹೋರಾಟದ ಫಲ: ಹಿಂದುತ್ವ ಕೋಮುವಾದವಲ್ಲ. ಬಿಜೆಪಿ ದಿಢೀರ್ ಬೆಳೆಯದೆ ಹಲವು ರೀತಿಯ ಪರಿಶ್ರಮದಿಂದ ಬೀದಿಯಲ್ಲಿ ನಿಂತು ಹೋರಾಟ ನಡೆಸಿ ಜನರ ವಿಶ್ವಾಸ ಪಡೆದು ಈ ಮಟ್ಟಕ್ಕೆ ಬಂದಿದ್ದೇವೆ. ಅಭಿವೃದ್ಧಿ ಕೆಲಸಗಳಿಗೆ ಅಡ್ಡಗಾಲು ಹಾಕುವುದೇ ರಾಜಕೀಯ ಎಂದು ಭ್ರಮಿಸಿದವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ದೊರೆಯಲಿದೆ ಎಂದು ಹೇಳಿದರು.
ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಆಶ್ವಾಸನೆಗಳ ಪಕ್ಷವಾಗಿದ್ದು, ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಮಾಡಿದೆ. ಗ್ರಾಮಗಳ ನೈಜ ಅಭಿವೃದ್ಧಿ ಮಾಡದೆ ಖಾಲಿ ಭರವಸೆಗಳ ರಾಜಕಾರಣ ಮಾಡುತ್ತಿದೆ. ಮೂಡಿಗೆರೆಯಲ್ಲಿ ಬಿಜೆಪಿ ಪಕ್ಷದ ಅಧ್ಯಕ್ಷರೇ ಬೇರೆ ಪಕ್ಷದ ಪರ ಮತಯಾಚಿಸಿದ್ದರಿಂದ ನಮಗೆ ಸೋಲುಂಟಾಯಿತು. ಈ ರೀತಿಯ ಬೆಳೆವಣಿಗೆ ನೋವು ತಂದಿದೆ ಎಂದು ಹೇಳಿದರು.
ವಿಭಜನೆಯಿಂದ ಅನುಕೂಲ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಮೂಡಿಗೆರೆ ಕ್ಷೇತ್ರಗಳಲ್ಲಿ ಎರಡು ಮಂಡಲಗಳನ್ನಾಗಿ ವಿಭಜನೆ ಮಾಡಿರುವುದು ಪಕ್ಷವನ್ನು ಮತ್ತಷ್ಟು ಬಲ ಪಡಿಸಲಿದೆ. ಸಾಮಾನ್ಯ ಕಾರ್ಯಕರ್ತನು ಉನ್ನತ ಸ್ಥಾನಕ್ಕೇರಿಸುವ ಪಕ್ಷ ಬಿಜೆಪಿ ಪಕ್ಷವಾಗಿದೆ ಎಂದು ನುಡಿದರು.
ಆಲ್ದೂರು ಮಂಡಲ ನೂತನ ಅಧ್ಯಕ್ಷರಾದ ಮಂಜುನಾಥ್ ಮಾತನಾಡಿ, ಆಲ್ದೂರು ಮಂಡಳಿಯಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರಿದ್ದು, ಸಂಘಟನೆಯಲ್ಲಿ ಎಂದೂ ಹಿಂದುಳಿದಿಲ್ಲ. ವಸ್ತಾರೆ ಮತ್ತು ಆಲ್ದೂರು ಜಿಲ್ಲಾ ಪಂಚಾಯಿತಿ ಸ್ಥಾನಗಳು ನಮ್ಮದಾಗಿಲ್ಲ ಎಂಬ ನೋವಿದೆ. ಮುಂದಿನ ತಿಂಗಳಲ್ಲಿ ಬರುವ ಖಾಂಡ್ಯ ಜಿ.ಪಂ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಲೋಕಸಭಾ ಚುನಾವಣೆಗೆ ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತೇವೆ ಎಂದು ತಿಳಿಸಿದರು.
ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ನಿರಂಜನ್, ಸದಸ್ಯರಾದ ಲೋಕೇಶ್, ಕಲ್ಮುರಡಪ್ಪ, ನಗರಾಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಗ್ರಾಮಾಂತರ ಅಧ್ಯಕ್ಷ ರವಿ, ಸಿ.ಡಿ.ಎ. ಮಾಜಿ ಅಧ್ಯಕ್ಷ ರಾಜಪ್ಪ, ನಗರಸಭೆ ಮಾಜಿ ಅಧ್ಯಕ್ಷ ಪ್ರೇಂಕುಮಾರ್, ತಮ್ಮಯ್ಯ, ಎಪಿಎಂಸಿ ಅಧ್ಯಕ್ಷ ರವೀಂದ್ರ, ಮಾಜಿ ಅಧ್ಯಕ್ಷ ವೆಂಕಟೇಶ್, ಅಂಬಳೆ ಹೋಬಳಿ ಅಧ್ಯಕ್ಷ ರವಿ, ಮಹೇಂದ್ರ, ಪ್ರಸನ್ನ, ಶಂಕರೇಗೌಡ, ನಿಂಗೇಗೌಡ, ಕಿಶನ್ ಇದ್ದರು. ಪ್ರೇಮೇಶ್ ಸ್ವಾಗತಿಸಿದು, ನಾರಾಯಣಾಚಾರಿ ವಂದಿಸಿದರು.