ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

Mainashree
Updated On : 28 Jul 2013, 12:01 pm

ಕ.ಪ್ರ.ವಾರ್ತೆ  ಚಿಕ್ಕಮಗಳೂರು   ಜು.27
ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಸಿಯೂಟ ಕಾರ್ಯಕರ್ತೆಯರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಜಿಲ್ಲಾ  ಸಮಿತಿಯ ನೇತೃತ್ವದಲ್ಲಿ ಇಲ್ಲಿನ ತಮಿಳು ಕಾಲೋನಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬಿಸಿಯೂಟ ಕಾರ್ಯಕರ್ತೆಯರು ಮೆರವಣಿಗೆ ನಡೆಸಿ ಬಳಿಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದರು.
ಸರ್ಕಾರ ಬಿಸಿಯೂಟ ಯೋಜನೆಗೆ ಕೋಟ್ಯಂತರ ರುಪಾಯಿ ಖರ್ಚು ಮಾಡಿ, ಮಕ್ಕಳ ಹಸಿವನ್ನು ನೀಗಿಸುತ್ತಿದೆ. ಆದರೆ, ಈ ಕಾರ್ಯಕ್ರಮದ ಅನುಷ್ಠಾನಕ್ಕೆ ದುಡಿಯುತ್ತಿರುವ ಬಿಸಿಯೂಟ ಕಾರ್ಯಕರ್ತೆಯರ ಬಗ್ಗೆ ಗಮನಹರಿಸದೆ ಕೇವಲ ನ್ಯೂನ್ಯತೆಗಳ ಬಗ್ಗೆ ಮಾತ್ರ ಮಾತನಾಡುತ್ತಿದೆ. ಇತ್ತೀಚೆಗೆ ಮುಖ್ಯಮಂತ್ರಿಯವರು ಮಂಡಿಸಿದ ಬಜೆಟ್‌ನಲ್ಲೂ ಕಾರ್ಯಕರ್ತೆಯರನ್ನು ಕಡೆಗಣಿಸಿರುವುದು ದುರದೃಷ್ಟಕರ. ಸರ್ಕಾರ ದಿನಕ್ಕೆ ಕೇವಲ 28 ರೂ.ಗಶ ವೇತನ ನೀಡಿ ಕನಿಷ್ಠ ಕೂಲಿಯಿಂದಲೂ ವಂಚಿಸುತ್ತಿದೆ ಎಂದು ತಿಳಿಸಲಾಗಿದೆ.
ಸಮಾನ ವೇತನ ನೀಡಬೇಕು: ಶಾಲೆಗಳಲ್ಲಿ ದುಡಿಯುತ್ತಿರುವ ಬಿಸಿಯೂಟ ಕಾರ್ಯಕರ್ತೆಯರಿಗೆ ತಿಂಗಳಿಗೆ 1000 ರು. ಸಂಬಳ ನೀಡಲಾಗುತ್ತಿದೆ. ಆದರೆ, ಇತರೆ ಇಲಾಖೆಯ ಕೆಲಸಗಾರರಿಗೆ ಸುಮಾರು 15 ರಿಂದ 20 ಸಾವಿರ ರುಪಾಯಿ ವೇತನ ನೀಡಲಾಗುತ್ತಿದೆ. ಸರ್ಕಾರ ಬಿಸಿಯೂಟ ಕಾರ್ಯಕರ್ತೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಲೆಕ್ಕ ವ್ಯತ್ಯಾಸ: ಶಾಲಾ ಮಕ್ಕಳಿಗೆ ಪೂರೈಸಲಾಗುತ್ತಿರುವ ಅಕ್ಕಿ, ಬೇಳೆಗಳು ಒಂದು ಚೀಲಕ್ಕೆ ಸುಮಾರು 5 ರಿಂದ 8 ಕೆಜಿವರೆಗೆ ಕಡಿಮೆ ನೀಡುತ್ತಿದ್ದು, ಇದರಿಂದ ಉಂಟಾಗುವ ಲೆಕ್ಕ ವ್ಯತ್ಯಾಸಕ್ಕೆ ಅಡುಗೆಯವರನ್ನು ಹೊಣೆಗಾರರನ್ನಾಗಿ ಮಾಡಿ ಹಲವಾರು ಕಾರ್ಯಕರ್ತೆಯರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಶಾಲಾ ಮಕ್ಕಳ ಆಹಾರಧಾನ್ಯಗಳನ್ನು ಕಡಿಮೆ ನೀಡಿ ವಂಚಿಸುತ್ತಿರುವ ಸರಬರಾಜುದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿದ್ದಾರೆ.
ವೈದ್ಯಕೀಯ ಸೌಲಭ್ಯ: ಅಡುಗೆ ಸಂದರ್ಭದಲ್ಲಿ ಅನಾಹುತಗಳು ನಡೆದಲ್ಲಿ ಅಡುಗೆಯವರಿಗೆ ಯಾವುದೇ ವೈದ್ಯಕೀಯ ಸೌಲಭ್ಯವಾಗಲೀ, ರಕ್ಷಣೆಯಾಗಲೀ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರದಿಂದ ಬ್ಯಾಂಕಿಗೆ ಬಿಡುಗಡೆಗೊಳಿಸುವ ಕಾರ್ಯಕ್ರಮದ ಅನುದಾನಕ್ಕೆ ನೀಡಲಾಗುವ ಲಕ್ಷಾಂತರ ರೂಪಾಯಿ ಬಡ್ಡಿ ಹಣವನ್ನು ಬಳಸಿ ಕಾರ್ಯಕರ್ತೆಯರ ನೆರವಿಗೆ ಬರಬೇಕು. ಈ ಹಿಂದೆ ಹೊರಡಿಸಿರುವ ಆದೇಶದಂತೆ ಎಲ್ಲಾ ಬಿಸಿಯೂಟ ಕಾರ್ಯಕರ್ತೆಯರಿಗೆ ಸಿಜಿ ನಿರ್ವಹಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ರಜೆ ಕಡ್ಡಾಯ: ಜಿಲ್ಲೆಯ ಹಲವಾರು ಶಾಲೆಗಳಲ್ಲಿ ಸುಮಾರು 3 ತಿಂಗಳಿಂದ ವೇತನ ನೀಡದೇ ಇರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳ ಸಂಬಳ ನೀಡುವಲ್ಲಿ ಗೊಂದಲ ಮಾಡಿಕೊಂಡು ಹಲವಾರು ಕಾರ್ಯಕರ್ತೆಯರಿಗೆ ಸಂಬಳ ನೀಡಿರುವುದಿಲ್ಲ, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು, ಶಾಲೆಗಳ ಗ್ಯಾಸ್ ಸ್ಟೌವ್, ಪೈಪ್ ಹಾಗೂ ಅಡುಗೆ ಪಾತ್ರೆಗಳನ್ನು ಆಗಿಂದಾಗ್ಗೆ ದುರಸ್ತಿಗೊಳಿಸಿ ಅಡುಗೆಗೆ ಸೂಕ್ತ ವಾತಾವರಣ ಕಲ್ಪಿಸಬೇಕು.
ಅಡುಗೆಯ ಸುರಕ್ಷತೆಯ ದೃಷ್ಟಿಯಿಂದ ಅಡುಗೆಗೆ ಸಂಬಂಧಪಡದ ವ್ಯಕ್ತಿಗಳನ್ನು ಅಡುಗೆ ಕೋಣೆಗೆ ಪ್ರವೇಶಿಸದಂತೆ ಎಚ್ಚರ ವಹಿಸಬೇಕು. ಕಾರ್ಯಕರ್ತೆಯರಿಗೆ ಅನುಕೂಲಕ್ಕೆ ತಕ್ಕಂತೆ ವರ್ಷದ 10 ರಜೆಯನ್ನು ಕಡ್ಡಾಯವಾಗಿ ನೀಡಬೇಕು ಹಾಗೂ ಕಾರ್ಯಕರ್ತೆಯರ ಶ್ರಮವನ್ನು ಗೌರವಿಸಬೇಕು.
ಹಾಜರಾತಿ ಕಾರಣದಿಂದ ಹಲವಾರು ಶಾಲೆಗಳಲ್ಲಿ ಸುಮಾರು 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯರನ್ನು ಬಿಡುಗಡೆಗೊಳಿಸಿ ಅತಂತ್ರಗೊಳಿಸಲಾಗುತ್ತಿದೆ. ಇಂತಹ ಕಾರ್ಯಕರ್ತೆಯರನ್ನು ಹೆಚ್ಚುವರಿಯಾಗಿ ಮಕ್ಕಳಿರುವ ಶಾಲೆಗಳಿಗೆ ಇಲಾಖೆ ವತಿಯಿಂದ ನಿಯೋಜಿಸಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕು.
ಗ್ಯಾಸ್ ಸಿಲಿಂಡರ್‌ಗಳನ್ನು ಶಾಲೆಗೆ ಪೂರೈಸಲು ಗ್ಯಾಸ್ ಕಂಪನಿಗಳಿಗೆ ದೂರಕ್ಕೆ ತಕ್ಕಂತೆ ಹಣ ಸಂದಾಯವಾಗುತ್ತಿದ್ದರೂ ಜಿಲ್ಲೆಯ ಶೇ. 40 ರಷ್ಟು ಶಾಲೆಗಳಿಗೆ ಗ್ಯಾಸ್ ಸಿಲಿಂಡರ್‌ಗಳನ್ನು ಪೂರೈಸದೆ ಅರ್ಧ ದಾರಿಯಲ್ಲಿಯೇ ಇಳಿಸಿ ಅಲ್ಲಿಂದ ಅಡುಗೆಯವರನ್ನು ಸಾಗಾಣಿಕೆ ಮಾಡಲು ಸೂಚಿಸಲಾಗುತ್ತಿದೆ. ಹಲವಾರು ಶಾಲೆಗಳಲ್ಲಿ ಅಡುಗೆ ಮಾಡುವ ಕಾರ್ಯಕರ್ತೆಯರ ಬ್ಯಾಂಕ್ ಶಾಖೆಗೆ ಸಂಬಳ ನೀಡದೆ ಆದೇಶ ಉಲ್ಲಂಘಿಸಲಾಗಿದೆ. ಇದು ಕಡೂರು ಮತ್ತು ತರೀಕೆರೆ ತಾಲೂಕಿನಲ್ಲಿ ಶೇ. 80 ರಷ್ಟಿದ್ದು ಈ ರೀತಿ ನಿರ್ಲಕ್ಷಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತಕ್ಷಣದಿಂದಲೇ ಇವರ ಖಾತೆಗೆ ಸಂಬಳ ಜಮಾ ಮಾಡಬೇಕು.
ಪ್ರತಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಜಿ. ರಘು, ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ್ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement