ಸುಣ್ಣಬಣ್ಣ ಕಾಣದ ಮಿನಿ ವಿಧಾನಸೌಧ
ಕ.ಪ್ರ.ವಾರ್ತೆ ಶೃಂಗೇರಿ ಜು.27
ಆಡಳಿತ ಕೇಂದ್ರವೆಂದರೆ ಅಲ್ಲೊಂದಿಷ್ಟು ಸ್ವಚ್ಛತೆ, ಮೂಲ ಸೌಕರ್ಯದ ಪೊರೈಕೆ, ಭದ್ರತೆ, ಇವೆಲ್ಲವನ್ನೂ ಸಾರ್ವಜನಿಕರು ನಿರೀಕ್ಷಿಸುವುದು ಸಹಜ. ಆದರೆ ತಾಲೂಕಿನ ಪ್ರಮುಖವಾದ ಆಡಳಿತ ಕೇಂದ್ರ ಬಿಂದುವಾಗಿರುವ ಮಿನಿ ವಿಧಾನಸೌಧ ಇದೆಲ್ಲದುದರಿಂದ ದೂರವಿರುವುದು, ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ನೆಮ್ಮದಿ ಕೇಂದ್ರ, ತಾಲೂಕು ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಕಚೇರಿ ಸೇರಿದಂತೆ ಮುಖ್ಯ ಇಲಾಖೆಗಳ ಕಚೇರಿಗಳು ಈ ಕಟ್ಟಡದಲ್ಲಿವೆ. ಆದರೆ ಗೋಡೆಗೆ ತಾಗಿಕೊಂಡೇ ಗಿಡಗಂಟಿಗಳು ಬೆಳೆದಿದ್ದು, ಚಾವಣಿಯ ಮೇಲ್ಭಾಗಕ್ಕೂ ಆವರಿಸಿದೆ. ಸುತ್ತಮುತ್ತಲಿನಲ್ಲಿ ಪರಿಸರದಲ್ಲಿ ಬಿದ್ದಿರುವ ತ್ಯಾಜ್ಯ. ಇಲ್ಲಿನ ಪರಿಸರ, ಶಿಥಿಲಗೊಂಡಿರುವ ಕಟ್ಟಡ ನೋಡಿದರೆ ಎಂತಹವರಿಗೂ ಮುಜುಗರವೆನಿಸುತ್ತದೆ.
ಸುಣ್ಣಬಣ್ಣವಿಲ್ಲ: ಸುಸಜ್ಜಿತ ಕಟ್ಟಡವಿದ್ದರೂ, ಸುಣ್ಣಬಣ್ಣ ಕಾಣದೇ ಹಲವು ವರ್ಷಗಳೇ ಕಳೆದಿವೆ. ದಿನನಿತ್ಯ ಜನ ಸಾಮಾನ್ಯನಿಂದ ಹಿಡಿದು ಜನಪ್ರತಿನಿಧಿಗಳವರೆಗೆ ಹಲವು ಮಂದಿ ಓಡಾಡುತ್ತಾರೆ. ಕಚೇರಿಯ ಕಾರ್ಯಕಲಾಪಗಳು ದಿನನಿತ್ಯ ನಡೆಯುತ್ತದೆ. ತಾಲೂಕಿನ ಮೂಲೆ ಮೂಲೆಯಿಂದ ಜನರು ನಿತ್ಯ ಇಲ್ಲಿ ತಮ್ಮ ಅಗತ್ಯ ಕಾರ್ಯಗಳಿಗೆ ಬರುತ್ತಿರುತ್ತಾರೆ.
ಈ ಕಟ್ಟಡಕ್ಕೆ 1984ರಲ್ಲಿ ಅಂದಿನ ರಾಜ್ಯ ನೀರಾವರಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ.ದೇವೆಗೌಡರು ಶಂಕುಸ್ಫಾಪನೆ ನೆರವೇರಿಸಿದ್ದರು. ಕೇವಲ ಐದಾರು ವರ್ಷಗಳಲ್ಲಿ ಕಾಮಗಾರಿ ತ್ವರಿಗತಿಯಲ್ಲಿ ನಡೆದು, 1990ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಉದ್ಘಾಟಿಸಿದರು.
ತಾಲೂಕಿನ ವಿವಿಧ ಕಡೆಗಳಿಂದ ಗ್ರಾಮಸ್ಥರು ಇಲ್ಲಿ ಅಗತ್ಯ ಕಾರ್ಯಗಳಿಗೆ ಬರುತ್ತಿರುತ್ತಾರೆ. ಒಟ್ಟಾರೆಯಾಗಿ ಈ ಕಟ್ಟಡ ದುರಸ್ತಿ ಕಾಣದೇ ಪಟ್ಟಣದ ಮೂಲೆಯಲ್ಲಿ ಪಾಳುಬಿದ್ದ ಬಂಗಲೆಯಂತಾಗಿದೆ .ಉಪಯೋಗಕ್ಕೆ ಬಾರದ ಹೊಂಡಗುಂಡಿಗಳಿಗೆ, ಅನಗತ್ಯ ಯೋಜನೆಗಳಿಗೆ ಲಕ್ಷಗಟ್ಟಲೆ ದುಂದುವೆಚ್ಚ ಮಾಡುವ ಸರ್ಕಾರ, ಜನಪ್ರತಿನಿಧಿಗಳು ಇನ್ನಾದರೂ ಇತ್ತ ಗಮನಹರಿಸಿ ಈ ಮಿನಿ ವಿಧಾನಸೌಧಕ್ಕೆ ಮೂಲ ಸೌಕರ್ಯ ಒದಗಿಸಿ ಇದಕ್ಕೊಂದು ಕಾಯಕಲ್ಪ ಒದಗಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.