ಕಾನೂನಿನ ಅರಿವು ಅಗತ್ಯ: ನ್ಯಾ.ತಿಮ್ಮಣ್ಣಾಚಾರ್
ಚಿಕ್ಕಮಗಳೂರು: ಸಂವಿಧಾನದ ತಳಹದಿ ಮೇಲಿರುವ ಕಾನೂನುಗಳು ಪ್ರತಿಯೊಬ್ಬ ವ್ಯಕ್ತಿಗೂ ಹಕ್ಕು, ಕರ್ತವ್ಯಗಳನ್ನು ನೀಡಿದ್ದು, ಅಂತೆಯೇ ಬಂಧಿತ ವ್ಯಕ್ತಿಗಳಿಗೂ ಸಹ ಅವರದೇ ಆದ ಹಕ್ಕು, ಕರ್ತವ್ಯಗಳಿದ್ದು, ಬಂಧಿತರಿಗೆ ಈ ಕುರಿತ ಅರಿವು ಅವಶ್ಯ ಎಂದು ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಕೆ.ಎಸ್. ತಿಮ್ಮಣ್ಣಾಚಾರ್ ಹೇಳಿದ್ದಾರೆ. ನಗರದ ಉಪ ಕಾರಾಗೃಹದಲ್ಲಿ ಶನಿವಾರ ನಡೆದ ಕಾನೂನು ಅರಿವು- ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಕೀಲ ಡಿ.ಬಿ. ಸುಜೇಂದ್ರ ಬಂಧಿತ ವ್ಯಕ್ತಿಯ ಹಕ್ಕುಗಳು ಮತ್ತು ನಾಗರೀಕ ಕಾನೂನುಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಉಪ ಕಾರಾಗೃಹದ ಅಧೀಕ್ಷಕ ಎಂ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಮಹದೇವಯ್ಯ, ವಕೀಲರ ಸಂಘದ ಕಾರ್ಯದರ್ಶಿ ಐ.ಎಸ್. ತೇಜಸ್ವಿ ಉಪಸ್ಥಿತರಿದ್ದರು.