ನೀರಾವರಿ ಯೋಜನೆಗೆ ಆದ್ಯತೆ
ಕ.ಪ್ರ.ವಾರ್ತೆ, ಕಡೂರು, ಜು.28
ಕಡೂರು ವಿಧಾನಸಭಾ ಕ್ಷೇತ್ರದ ಜನರ ಬಹುಮುಖ್ಯ ಬೇಡಿಕೆಯಾಗಿರುವ ಹೆಬ್ಬೆ ಜಲತಿರುವು ಯೋಜನೆ ಜಾರಿ ಮತ್ತು ಉಳಿದ ನೀರಾವರಿ ಯೋಜನೆಗಳನ್ನು ಸಾಕಾರಗೊಳಿಸುವುದೇ ನನ್ನ ಪ್ರಮುಖ ಉದ್ದೇಶ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ಅವರು ಕಡೂರು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಾನು ವಿ.ಪ. ಸದಸ್ಯ ಆಗಿದ್ದಾಗಲೇ ಜನರ ಭಾವನೆಗೆ ದಕ್ಕೆ ಬಾರದ ರೀತಿಯಲ್ಲಿ ಕೆಲಸ ಮಾಡಿದ್ದು, ತೃಪ್ತಿ ತಂದಿದೆ. ಜನರ ಬೇಕು ಬೇಡಗಳ ಬಗ್ಗೆಯೂ ತಿಳಿದಿದೆ ಎಂದವರು ಹೇಳಿದರು.
ಮುಗಿದ ಕಾಮಗಾರಿ: ಕಡೂರು ವಿಧಾನಸಭಾ ಕ್ಷೇತ್ರದ ಪಂಚನಹಳ್ಳಿ, ನಿಡುವಳ್ಳಿ ಮತ್ತು ಗಂಗನಹಳ್ಳಿ ಕೆರೆಗಳಿಗೆ ಹೇಮಾವತಿ ನದಿಯಿಂದ ನೀರುಣಿಸುವ ಕಾಮಗಾರಿ ಈಗಾಗಲೇ ಮುಗಿದಿದೆ. ಈ ಕೆರೆಗಳಿಗೆ ನೀರು ಹರಿಸುವ ಕಾರ್ಯ ಮಾತ್ರ ಬಾಕಿಯಿದ್ದು, ಶೀಘ್ರದಲ್ಲಿಯೇ ನೀರು ಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಹೋರಾಟದ ಹಂತದಲ್ಲಿರುವ ಭದ್ರಾ ಮೇಲ್ದಂಡೆ ಯೋಜನೆಯಿಂದ ನನ್ನ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಪ್ರದೇಶಕ್ಕೆ ಬರಲಿರುವ ನೀರು ತರುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಕಡೂರು ಪಟ್ಟಣದಲ್ಲಿ ಆರಂಭಗೊಂಡಿರುವ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಕೆಲವು ಸಮಸ್ಯೆಗಳಿದ್ದು ಅವುಗಳಲ್ಲಿ ಗೋಣಿ ಚೀಲದ ಕೊರತೆ ಮತ್ತು ದಾಸ್ತಾನು ಮಾಡುವ ಬಗ್ಗೆ ಇದ್ದ ಸಮಸ್ಯೆ ನಿವಾರಣೆಯಾಗಿ ಖರೀದಿ ಪ್ರಕ್ರಿಯೆ ಮುಂದುವರಿಯುತ್ತಿದೆ. ತಾಲೂಕಿನ ಗಡಿ ಭಾಗದ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಪಂಚನಹಳ್ಳಿಯಲ್ಲಿ ಶೀಘ್ರವೇ ಮತ್ತೊಂದು ಕೊಬ್ಬರಿ ಖರೀದಿ ಕೇಂದ್ರ ಆರಂಭಗೊಳ್ಳಲಿದೆ ಎಂದರು.
80 ಪ್ರಕರಣ: ಕಡೂರು ತಾಲೂಕಿನಲ್ಲಿ ಡೆಂಘೀ ಸೋಂಕಿತ 80 ಪ್ರಕರಣ ವರದಿಯಾಗಿರುವುದು ಗಮನಕ್ಕೆ ಬಂದಿದೆ. ತಿಪ್ಪನಗಟ್ಟ ಮತ್ತು ಕಡೂರು ಪಟ್ಟಣದ ಕೋಟೆ ಮತ್ತು ಮಲ್ಲೇಶ್ವರದಲ್ಲಿ ಇಬ್ಬರು ಡೆಂಘೀ ಸೋಂಕಿನಿಂದ ಸಾವು ಸಂಭವಿಸಿರುವ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳೊಂದಿಗೆ ಚರ್ಚೆ ಮಾಡಿ ಅಗತ್ಯ ಔಷಧಿ ಮತ್ತು ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಆಗಸ್ಟ್ 4ರಂದು ಕಡೂರು ಪಟ್ಟಣದಲ್ಲಿ ರೋಟರಿ, ಲಯನ್ಸ್, ರೇಲ್ವೆ ಬಳಕೆದಾರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಮುಂದಿರುವ ಸವಾಲುಗಳು ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ.
ಗ್ರಾಮೀಣರ ಸಮಸ್ಯೆ ಸಂವಾದ: ಈ ಕಾರ್ಯಕ್ರಮದಲ್ಲಿ ಗ್ರಾಮೀಣರ ಸಮಸ್ಯೆ ಪರಿಹಾರದ ಕುರಿತು ಸಂವಾದ ಕಾರ್ಯಕ್ರಮ ಪುಂಡಲೀಕ ಹಾಲಂಬಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಂವಾದ ಕಾರ್ಯಕ್ರಮದಲ್ಲಿ ಹೆಚ್.ಆರ್.ರಂಗನಾಥ್ ಭಾಗವಹಿಸಿ ಭಾಷಣ ಮಾಡಲಿದ್ದಾರೆ.
ಸಾರ್ವಜನಿಕರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ದತ್ತ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಭಂಡಾರಿ ಶ್ರೀನಿವಾಸ್, ರವಿಪ್ರಕಾಶ್, ಮಂಜುನಾಥ ಪ್ರಸನ್ನ, ವಿನಯಕುಮಾರ್, ಹರೀಶ್, ಶೇಖರ್ ಮೊದಲಾದವರು ಭಾಗವಹಿಸಿದ್ದರು.