ಯೋಗಾಸನದಿಂದ ಆರೋಗ್ಯ ವೃದ್ಧಿ
ಚಿಕ್ಕಮಗಳೂರು: ಯೋಗಾಸನ, ನೈತಿಕ ಮೌಲ್ಯಗಳನ್ನು ವೈಯಕ್ತಿಕ ನೆಲೆಯಲ್ಲಿ ಅಳವಡಿಸಿಕೊಂಡರೆ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ರವಿಕುಮಾರ್ ಹೇಳಿದ್ದಾರೆ.
ನಗರ ಆಜಾದ್ ಪಾರ್ಕ್ ಹಿರಿಯ ಪ್ರಾಥಮಿಕ ಕನ್ನಡ ಸರ್ಕಾರಿ ಶಾಲೆಯ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಯೋಗಾಸನ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಗ ಇದ್ದಲ್ಲಿ ರೋಗವಿಲ್ಲ ಎಂಬ ಮಾತಿದೆ. ಯೋಗಪಟುಗಳು ಸಹಜವಾಗಿಯೇ ಶಿಸ್ತು ಮತ್ತು ಸಂಯಮ ರೂಢಿಸಿಕೊಳ್ಳುತ್ತಾರೆ. ದೈಹಿಕ ಮತ್ತು ಆರೋಗ್ಯಪಾಲನೆಗೆ ಯೋಗಾಸನ ಸಹಕಾರಿ. ಮಾನಸಿಕವಾದ ಆರೋಗ್ಯಕ್ಕೆ ನೈತಿಕತೆ, ಮೌಲ್ಯಗಳು, ನೈರ್ಮಲ್ಯ ಅವಶ್ಯಕ. ವೈಯಕ್ತಿಕ ನೆಲೆಯಲ್ಲಿ ಇವುಗಳನ್ನು ಶಾಲಾವಧಿಯಲ್ಲಿ ಮಕ್ಕಳಿಗೆ ಕಲಿಸುವಂತಾದರೆ ಅರ್ಥಪೂರ್ಣವಾಗುತ್ತದೆ ಎಂದು ರವಿಕುಮಾರ್ ಹೇಳಿದರು.
ಆಜಾದ್ ಪಾರ್ಕ್ ಶಾಲೆಯ ಮುಖ್ಯ ಶಿಕ್ಷಕ ಎಸ್.ಈ. ಲೋಕೇಶ್ವರಾಚಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಪ್ರತಿನಿತ್ಯ ಸರಳ ವ್ಯಾಯಾಮ, ಯೋಗಾಸನ ಮತ್ತು ಕ್ರೀಡಾಚಟುವಟಿಕೆಗಳಲ್ಲಿ ತೊಡಗುವುದು ಉತ್ತಮ ಸಂಪ್ರದಾಯ. ಅಭ್ಯಾಸದ ಜೊತೆಗೆ ಗುರು- ಹಿರಿಯರನ್ನು ಗೌರವಿಸುತ್ತಾ ಕಲಿಕೆಯಲ್ಲಿ ತೊಡಗಿದರೆ ಯಶಸ್ಸು ಖಚಿತ. ಓದು- ಬರಹದ ಜೊತೆಗೆ ಸದ್ಗುಣ, ಸದಾಚಾರಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ತೀರ್ಪುಗಾರರಾಗಿದ್ದ ಸಿರಿವಾಸೆ ಪ್ರೌಢಶಾಲಾ ದೈಹಿಕ ಶಿಕ್ಷಕ ರವಿಕುಮಾರ್, ಕೈಮರ ಪ್ರೌಢಶಾಲೆಯ ಯತೀಶ್, ರಾಮನಹಳ್ಳಿ ಶಾಲಾದೈಹಿಕ ಶಿಕ್ಷಣ ಶಿಕ್ಷಕಿ ವೇದಾವತಿ ಉಪಸ್ಥಿತರಿದ್ದರು.