ತಗ್ಗಿದ ಮಳೆ ಅಬ್ಬರ
ಶೃಂಗೇರಿ: ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮುಂದುವರೆದಿದ್ದ ಮಳೆಯ ಅಬ್ಬರ ಸೋಮವಾರ ಕ್ಷೀಣಿಸಿತ್ತು. ಮಧ್ಯಾಹ್ನದಿಂದ ಬಿಸಿಲು ಮಳೆಯ ವಾತಾವರಣ ಕಂಡುಬಂದಿತು.
ಮಳೆಯಿಂದ ತಾಲೂಕಿನ ವಿವಿಧೆಡೆ ಭೂಕುಸಿತ, ರಸ್ತೆ ಸಂಪರ್ಕ ಕಡಿತ, ಮನೆಗಳಿಗೆ ಹಾನಿ, ವಿದ್ಯುತ್ ಸಂಪರ್ಕ ಕಡಿತ,ಅಡಕೆ, ಕಾಫಿ, ಬಾಳೆ ತೋಟಗಳಿಗೆ ಹಾನಿ,ಅಡಕೆ ಕೊಳೆ ರೋಗ ಸೇರಿದಂತೆ ಸಾಕಷ್ಟು ಹಾನಿಯುಂಟಾಗಿದೆ.
ಮಳೆ ಗಾಳಿಯ ಅಬ್ಬರದಿಂದ ತತ್ತರಿಸಿದ್ದ ಜನರು ಸೋಮವಾರದ ವಾತಾವರಣದಿಂದ ಸ್ವಲ್ಪಮಟ್ಟಿನ ನಿಟ್ಟುಸಿರು ಬಿಡುವಂತಾಯಿತು. ಕಳೆದ ಎರಡು ತಿಂಗಳಿಂದ ಸತತವಾಗಿ ಸುರಿಯುತ್ತಿದ್ದ ಮಳೆಗೆ ವಿರಾಮವೇ ಇರಲಿಲ್ಲ. ಗಾಳಿಯಿಂದ ತಾಲೂಕಿನಾದ್ಯಂತ ಹಲವೆಡೆ ಬೃಹತ್ ಮರಗಳು, ಬಿದಿರು ಮೆಳೆಗಳು ಧರೆಗುರುಳಿದ್ದರಿಂದ ವಿದ್ಯುತ್ ಕಂಬಗಳು, ತಂತಿಗಳು ತುಂಡಾಗಿ ವಿದ್ಯುತ್ ಲೈನ್ ಕಡಿತಗೊಂಡು ಸಾಕಷ್ಟು ಗ್ರಾಮಗಳಲ್ಲಿ ಕತ್ತಲ ವಾತಾವರಣ ಉಂಟಾಗಿತ್ತು. ಇನ್ನು ತಾಲೂಕಿನಲ್ಲಿ ವಿದ್ಯುತ್ ಸ್ಪರ್ಶಕ್ಕೊಳಗಾಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಸಂಭವಿಸಿದೆ.