ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನದಿ ತಟದಲ್ಲಿದ್ದರೂ ಕುಡಿವ ನೀರಿಗೆ ಬರ

Rashmi Kasaragodu
Updated On : 30 Jul 2013, 11:22 am

ನೆಮ್ಮಾರ್ ಅಬೂಬಕರ್
ಶೃಂಗೇರಿ: ಇಲ್ಲಿ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಹೊಂಡಗಳಿಂದ ಕೂಡಿದ ರಸ್ತೆ. ಬಸ್ಸು ತಂಗುದಾಣವಿದ್ದರೂ ಬಸ್ಸು ಸಂಚಾರವಿಲ್ಲ... ಹೀಗೆ ಹಲವು ಮೂಲ ಸಮಸ್ಯೆಗಳಿವೆ.
 ಇದು ತಾಲೂಕಿನ ನಕ್ಸಲ್ ಪ್ರಭಾವಿತ ಮರ್ಕಲ್ ಪಂಚಾಯಿತಿ ಯಡದಾಳು ಗ್ರಾಮದ ತೋರಣಗೆದ್ದೆ ಪರಿಶಿಷ್ಟ ಕಾಲೋನಿಯ ಸಮಸ್ಯೆಗಳು. ಇಲ್ಲಿ 35ಕ್ಕೂ ಅಧಿಕ ಕುಟುಂಬಗಳಿವೆ. ಇಲ್ಲಿ ಸಾಕಷ್ಟು ನಲ್ಲಿಗಳಿದ್ದರೂ ಉಪಯೋಗಕ್ಕೆ ಬಾರದಾಗಿವೆ. ಇಲ್ಲಿನ ನಿವಾಸಿಗಳು ಕಳೆದ ಕೆಲ ಸಮಯದಿಂದ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆಯಲ್ಲಿ ಸುಮಾರು 1.ಕಿ.ಮಿ ದೂರದ ನಳಿನಿ ನದಿಯಿಂದ ನೀರು ತರಬೇಕಿದೆ. ಮಳೆಗಾಲದಲ್ಲಿ ಮಳೆ ನೀರೆ ಗತಿ. ಮಳೆಗಾಲದಲ್ಲಿ ನದಿ ತುಂಬಿ ಹರಿಯುವುದರಿಂದ ನೀರು ತುಂಬಲು ಇಲ್ಲಿ ಜಾಗವಿಲ್ಲ.
ಮೂಲ ಸೌಕರ್ಯಗಳ ಕೊರತೆ: ಅಪಾಯಕಾರಿ ಗುಂಡಿಯಿರುವುದರಿಂದ ನೀರು ತರಲು ಸಾಧ್ಯವಿಲ್ಲ. ಸಮರ್ಪಕ ದಾರಿಯೂ ಇಲ್ಲ. ಇದ್ದ ಒಂದು ಓಬಿರಾಯನ ಕಾಲದ ನೀರೆತ್ತುವ ಯಂತ್ರ ಕೆಟ್ಟು ಹೋಗಿದೆ. ವಿದ್ಯುತ್ ಇದ್ದಾಗ ಮಾತ್ರ ಇಲ್ಲಿನ ಜನರಿಗೆ ಕುಡಿಯುವ ನೀರಿನ ಸೌಲಭ್ಯವಿತ್ತು. ಆದರೆ ಈಗ ಈ ಮೋಟರ್ ಕಿತ್ತು ಹಾಕಲಾಗಿದೆ. ನದಿಯ ಪಕ್ಕದಲ್ಲಿಯೇ ಒಂದು ಕಟ್ಟಡ ನಿರ್ಮಿಸಲಾಗಿದ್ದರೂ ಅದರೊಳಗೆ ನೀರು ಸಂಗ್ರಹವಾಗುವ ಬದಲು ನೀರು ಹರಿದು ಹೋಗುತ್ತಿದೆ. ಕಟ್ಟಡದ ಕಲ್ಲುಗಳು ಹಂತ ಹಂತವಾಗಿ ಕಳಚಿ ನದಿಗುರುಳುತ್ತಿವೆ. ಮೋಟರ್ ಶೆಡ್ ಬಾಗಿಲು ಕಿತ್ತುಹೋಗಿವೆ. ಒಳಗಿನ ಉಪಕರಣಗಳೆಲ್ಲ ತುಕ್ಕು ಹಿಡಿದಿವೆ.
ನಕ್ಸಲ್ ಪ್ರಭಾವಿತ ಪ್ರದೇಶ: ಈ ಬಗ್ಗೆ ವಾರ್ಡ್ ಸಭೆ, ಗ್ರಾಮಸಭೆ, ಜನಸ್ಪಂದನ ಸಭೆಗಳಲ್ಲಿ ಸಾಕಷ್ಟು ಮನವಿ, ಅಹವಾಲುಗಳನ್ನು ಮಂಡಿಸಿದ್ದರೂ ಸಂಬಂಧಪಟ್ಟ ಅಧಿಕಾರಿಗಳ, ಜನಪ್ರತಿನಿದಿಗಳಿಗೆ ಅರ್ಥವಾಗುತ್ತಲೇ ಇಲ್ಲವೆನ್ನುತ್ತಾರೆ ಕಾಲೋನಿ ನಿವಾಸಿಗಳು. ಇದು ನಕ್ಸಲ್ ಪ್ರಭಾವಿತ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದರೂ ಇಲ್ಲಿನ ನಿವಾಸಿಗಳ ಮೂಲ ಸಮಸ್ಯೆಗಳ ಬಗ್ಗೆ ಜನಪ್ರತಿನಿದಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ವಿಪರ್ಯಾಸವೇ ಸರಿ.
ಹದಗೆಟ್ಟ ರಸ್ತೆ: ಈ ಭಾಗದ ರಸ್ತೆಗಳು ಹೊಂಡಗಳಿಂದ ಕೂಡಿದ್ದು,ಚರಂಡಿಯ ನೀರೆಲ್ಲ ರಸ್ತೆಯ ಮೇಲೆ ಹರಿಯುತ್ತದೆ. ರಸ್ತೆಯಿದ್ದರೂ ಸಂಚಾರಕ್ಕೆ ದುಸ್ತರವಾಗಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಬಸ್ಸು ತಂಗುದಾಣವಿದ್ದರೂ ಬಸ್ಸು ಸಂಚಾರವಿಲ್ಲ. ಇದರಿಂದ ಈ ಗ್ರಾಮದ ಸುತ್ತಮುತ್ತಲಿನ ಜನರು ಸುಮಾರು ಆರೇಳು ಕಿಲೋಮೀಟರ್ ಕಾಲ್ನಡಿಗೆಯಲ್ಲಿಯೇ ಸಾಗಿ ಪ್ರಯಾಣ ಮಾಡಬೇಕು. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು, ಅನಾರೋಗ್ಯಕ್ಕೆ ತುತ್ತಾದವರ ಗೋಳು ಹೇಳತೀರದು.
ಭೂಕುಸಿತ: ಈ ಮಾರ್ಗ ತುಂಗಾ ನದಿಯ ದಡದಲ್ಲಿ ನದಿ ಪ್ರವಾಹದಿಂದ ಭೂಕುಸಿತ ಆರಂಭವಾಗಿದ್ದು, ದಡದಲ್ಲಿ ಪ್ರಯಾಣ ಅಪಾಯಕಾರಿಯಾಗಿದೆ. ಶಾಲಾಕಾಲೇಜು ವಿದ್ಯಾರ್ಥಿಗಳು ಈ ಮಾರ್ಗದಲ್ಲಿ ಓಡಾಡುವುದರಿಂದ ಅವಘಡಗಳು ಸಂಭವಿಸುವ ಸಾಧ್ಯತೆಗಳಿದ್ದು, ಇಲ್ಲಿ ತಡೆಬೇಲಿಯ ಅಗತ್ಯವಿದೆ ಎಂದು ಕಾಲೋನಿಯ ನಿವಾಸಿಗಳಾದ ಪುಡಿಯ, ರಾಮ, ಅಮಅಣಪ್ಪ, ವಂಕಟೇಶ, ಯಶೋದ, ಮಾಲತಿ ಕೋರಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ, ಇಲ್ಲಿನ ನಿವಾಸಿಗಳ ಸಮಸ್ಯೆಗಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement