ಸೇತುವೆಗೆ ತಡೆಗೋಡೆ ನಿರ್ಮಿಸಲು ಮನವಿ
ಚಿಕ್ಕಮಗಳೂರು: ನಗರ ಸಮೀಪವಿರುವ ಅಂಬಳೆ ಕಟ್ಟೆಹೊಳೆ ಸೇತುವೆಗೆ ತಡೆಗೋಡೆ ಇಲ್ಲದ ಕಾರಣ ಪ್ರಯಾಣಿಕರು ಆ ಸ್ಥಳಗಳಲ್ಲಿ ತೆರಳುವ ಸಂದರ್ಭದಲ್ಲಿ ಉಸಿರು ಬಿಗಿ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ತಲೆದೋರಿದೆ.
ಜಿಲ್ಲೆಯ ವಿವಿದೆಡೆಗಳಲ್ಲಿರುವ ಕೆರೆ ಮತ್ತು ಸೇತುವೆಗಳಿಗೆ ತಡೆಗೋಡೆ ನಿರ್ಮಿಸುವ ಮೂಲಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಯುವಶಕ್ತಿ ಮಾನವತಾ ವೇದಿಕೆ ಅಧ್ಯಕ್ಷ ಸತೀಶ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಬಾಲಚಂದ್ರ ಅವರಿಗೆ ಮನವಿ ಸಲ್ಲಿಸಿದರು.
ವರುಣ ಮಂತ್ರ ಜಪ ಕಾರ್ಯಕ್ರಮ
ಕೊಪ್ಪ: ವಿಶ್ವಕಲ್ಯಾಣಕ್ಕಾಗಿ ಇಲ್ಲಿನ ಫಾಲಚಂದ್ರಯಜ್ಞ ಕ್ಷೇತ್ರದಿಂದ ರುದ್ರಜಪ, ವರುಣ ಮಂತ್ರ ಜಪ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು 31 ರಂದು ಬಾಳಗಡಿಯ ಭಾರತೀರ್ಥ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಜ್ಯೋತಿಷ್ಯದ ಪ್ರಕಾರ ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಮುಸ್ಸೂಚನೆಗಳು ಕಂಡು ಬರುತ್ತಿರುವುದರಿಂದ ಕೃಷಿ ಮತ್ತು ಜನ ಸಮಾನ್ಯರ ರಕ್ಷಣೆಯ ಉದ್ದೇಶದಿಂದ ವರಣ ದೇವನನ್ನು ಕುರಿತು ಜು.27 ರಿಂದ ರುದ್ರಜಪ, ವರುಣ ಮಂತ್ರ ಜಪವನ್ನು ಮಾಡಲಾಗುತ್ತಿದೆ. ಜು.31 ರ ಬೆಳಿಗ್ಗೆ ನವಗ್ರಹ ಶಾಂತಿ, ರುದ್ರಹೋಮದ ಪೂರ್ಣಾಹುತಿ ಹಾಗೂ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಮಳೆ ಪ್ರಮಾಣ ಕಡಿಮೆಯಾಗುವಂತೆ ಭಗವಂತನಲ್ಲಿ ಪ್ರಾರ್ಥನೆ ಮಾಡಲಾಗುವುದು. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಭಕ್ತಾಧಿಗಳು ಭಾಗವಹಿಸ ಬೇಕೆಂದು ಟ್ರಸ್ಟ್‌ನ ಅಧ್ಯಕ್ಷ ಕೆ.ಆರ್. ಸತೀಶ್ ಭಟ್ ವಿನಂತಿಸಿದ್ದಾರೆ.
ಇಂದು ಟೋನಿ ಚಿತ್ರ ತಂಡ ಆಗಮನ
ಚಿಕ್ಕಮಗಳೂರು: ಟೋನಿ ಚಿತ್ರದ ಪ್ರಚಾರಕ್ಕಾಗಿ ಚಲನಚಿತ್ರ ನಟ ಶ್ರೀನಗರ ಕಿಟ್ಟಿ ಹಾಗೂ ನಾಯಕಿ ಐಂದ್ರಿತಾ ರೈ ಸೇರಿದಂತೆ ಚಿತ್ರ ತಂಡ ಮಂಗಳವಾರ ನಗರಕ್ಕೆ ಆಗಮಿಸುತ್ತಿದ್ದು, ವಿವಿಧ ಕಾಲೇಜುಗಳಿಗೆ ತೆರಳಿ ಚಿತ್ರದ ಬಗ್ಗೆ ಪ್ರಚಾರ ಮಾಡಲಿದ್ದಾರೆ. ಬೆಳಗ್ಗೆ 9.30ಕ್ಕೆ ಎಂ.ಇ.ಎಸ್. ಕಾಲೇಜು, 10.45ಕ್ಕೆ ಟೌನ್ ಮಹಿಳಾ ಸಮಾಜ ಹಾಗೂ 11.15ಕ್ಕೆ ಐ.ಡಿ.ಎಸ್.ಜಿ. ಕಾಲೇಜಿನಲ್ಲಿ ಪ್ರಚಾರ ಮಾಡುವ ತಂಡದಲ್ಲಿ ನಿರ್ದೇಶಕ ಜಯತೀರ್ಥ, ನಿರ್ಮಾಪಕ ಇಂದ್ರಕುಮಾರ್ ಹಾಗೂ ಸುಗ್ನಾನ್ ಸೇರಿದಂತೆ ಹಲವರು ಆಗಮಿಸುತ್ತಿದ್ದಾರೆ.