ಇಂದು ಕಾವಡಿ ಉತ್ಸವ
ಚಿಕ್ಕಮಗಳೂರು: ತಾಲೂಕಿನ ಕುಮಾರಗಿರಿಯ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಆಡಿಕೃತ್ತಿಕಾ ಕಾವಡಿ ಉತ್ಸವ ಬುಧವಾರ ನಡೆಯಲಿದೆ. ಉತ್ಸವದ ಅಂಗವಾಗಿ ಬೆಳಿಗ್ಗೆ 6 ಗಂಟೆಗೆ ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ ಜರುಗಲಿದ್ದು, ವಿವಿಧ ಊರುಗಳಿಂದ ಕಾಲ್ನಡಿಗೆಯಲ್ಲಿ ಆಗಮಿಸುವ ಭಕ್ತರು ಮಹಾ ಆಡಿಕೃತ್ತಿಕಾ ಕಾವಡಿಯನ್ನು ಸನ್ನಿಧಿಯಲ್ಲಿ ಸಮರ್ಪಿಸಲಿದ್ದಾರೆ.
ಇಂದು ಪತ್ರಿಕಾ ದಿನಾಚರಣೆ
ನರಸಿಂಹರಾಜಪುರ: ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಜು.31ರ ಬುಧವಾರ ಪತ್ರಿಕಾ ದಿನಾಚರಣೆ ಕಾರ್ಯಕ್ರಮವು ಕೃಷಿ ಭವನದಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಶಾಸಕ ಡಿ.ಎನ್. ಜೀವರಾಜ್ ಬಹುಮಾನ ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಸುಜಾತ, ಮುಖಂಡರಾದ ಡಾ.ಕೆ.ಪಿ. ಅಂಶುಮಂತ್, ವೆನಿಲಾ ಭಾಸ್ಕರ್, ಹೊಸೂರು ಸುರೇಶ್ ಉಪಸ್ಥಿತರಿರುವರು.
ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 10 ಗಂಟೆಯಿಂದ ತಾಲೂಕಿನ ಪ್ರಾಥಮಿಕ ಶಾಲಾ ಮಕ್ಕಳಿಗೆ ಜಾನಪದ ಗೀತೆ ಸ್ಪರ್ಧೆ, ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಭಾಷಣ ಸ್ಪರ್ಧೆ, ಪದವಿ ಪೂರ್ವ ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಆಶು ಭಾಷಣ ಸ್ಫರ್ಧೆ ಏರ್ಪಡಿಸಲಾಗಿದೆ.
ಯುವ ಪೀಳಿಗೆ ಅಡ್ಡದಾರಿ ಹಿಡಿದರೆ ಭವಿಷ್ಯಕ್ಕೆ ಸಂಚಕಾರ
ಮೂಡಿಗೆರೆ: ಇಂದಿನ ಯುವ ಪೀಳಿಗೆ ತಮಗೆ ಅರಿವಿಲ್ಲದ್ದಂತೆ ಅಡ್ಡದಾರಿಗೆ ಇಳಿಯುತ್ತಿದ್ದು, ಇದು ಹೀಗೆಯೇ ಮುಂದುವರೆದಲ್ಲಿ ಭವಿಷ್ಯಕ್ಕೆ ಸಂಚಕಾರ ಉಂಟಾಗುತ್ತದೆ. ಪೋಷಕರು, ಶಿಕ್ಷಕರು ಹಾಗೂ ಸಂಘ ಸಂಸ್ಥೆ ಮಾರ್ಗದರ್ಶಕರಾದಲ್ಲಿ ಮಾತ್ರ ದೇಶದ ಉತ್ತಮ ಪ್ರಜೆಯನ್ನಾಗಿಸಲು ಸಾಧ್ಯ ಎಂದು ಲಯನೆಸ್ ದ್ವಿತೀಯ ಜಿಲ್ಲಾ ಉಪರಾಜ್ಯಪಾಲೆ ಕವಿತಾ ಎಸ್. ಶಾಸ್ತ್ರಿ ಹೇಳಿದರು. ಪಟ್ಟಣದ ಜೇಸಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡ್ರಗ್, ಆಲ್ಕೋಹಾಲಿಕ್, ಗುಟ್ಕಾ ಸೇವನೆ ಶೊಕಿಗಾಗಿ ಶುರುವಾಗಿ ನಂತರ ಚಟವಾಗಿ ಪರಿವರ್ತನೆವಾಗಿ ಬದುಕನ್ನು ನಾಶ ಪಡಿಸುತ್ತಿವೆ ಎಂದು ಹೇಳಿದರು.
ಲಯನ್ಸ್ ಅಧ್ಯಕ್ಷ ಬಿ.ಎಸ್. ಜಯರಾಮ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಯನೆಸ್ ರಾಜ್ಯಪಾಲ ಡಾ.ಸಂತೋಷ್.ಕೆ. ಶಾಸ್ತ್ರಿ ಮಾತನಾಡಿದರು. ಮಾಜಿ ಜಿಲ್ಲಾ ರಾಜ್ಯಪಾಲ ಎನ್.ಎಲ್.ಸುಂದರೇಶ್ವರ್ ಉದ್ಘಾಟಿಸಿದರು, ಲಯನೆಸ್ ಅಧ್ಯಕ್ಷೆ ಸುವರ್ಣ ದಯಾ ಸಾಗರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೂತನ ಅಧ್ಯಕ್ಷ ಅಶೋಕ್ ಕುಮಾರ್, ಕಾರ್ಯದರ್ಶಿ ಎಂ.ಜೆ. ಭರತ್, ಖಜಾಂಚಿ ಗುರುಮೂರ್ತಿ ಅವರಿಗೆ ಅಧ್ಯಕ್ಷ ಜಯರಾಂ, ಕಾರ್ಯದರ್ಶಿ ಚಂದ್ರೇಶ್, ಖಜಾಂಚಿ ಅಶ್ವಥ್ ಅಧಿಕಾರ ಹಸ್ತಾಂತರಿಸಿದರೆ. ಲಯನೆಸ್ ಅಧ್ಯಕ್ಷೆ ಪೂರ್ಣೇಶ್ವರಿ ಲಕ್ಷ್ಮಣ ಗೌಡ, ಕಾರ್ಯದರ್ಶಿ ವನ ಪೂರ್ಣೇಶ್, ಖಜಾಂಚಿ ಪ್ರಣತಿ ಪ್ರದೀಪ್ ಅವರಿಗೆ ಅಧ್ಯಕ್ಷೆ ಸುವರ್ಣ ದಯಾಸಾಗರ್, ಕಾರ್ಯದರ್ಶಿ ಸುಕನ್ಯ ಚಂದ್ರೇಶ್, ಖಜಾಂಚಿ ರೂಪ ಅಶ್ವತ್ ಅಧಿಕಾರವನ್ನು ಹಸ್ತಾಂತರಿಸಿ ಶುಭ ಕೋರಿದರು.