ಮಳೆ ಹಾನಿ ಪ್ರದೇಶಕ್ಕೆ ಸಂಸದ ಭೇಟಿ
ಶೃಂಗೇರಿ: ತಾಲೂಕಿನಾದ್ಯಂತ ಮಳೆಗೆ ಹಾನಿಗೊಳಗಾದ ಕೆಲ ಪ್ರದೇಶಗಳಿಗೆ ಚಿಕ್ಕಮಗಳೂರು- ಉಡುಪಿ ಲೋಕಸಭಾ ಸದಸ್ಯ ಕೆ. ಜಯಪ್ರಕಾಶ್ ಹೆಗ್ಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಂಡಗೋಡು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ಮಳೆಯಿಂದ ಉಂಟಾಗಿದ್ದ ಭೂಕುಸಿತ, ರಸ್ತೆ ಸಂಪರ್ಕ ಕಡಿತ ಪರಿಶೀಲಿಸಿ, ಅದರ ದುರಸ್ತಿಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ವರದಿ ತೆಗೆದುಕೊಂಡರು. ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಸೂಚಿಸಿದರು. ಸೌಭಾಗ್ಯ ಗೋಪಾಲನ್, ಎಚ್.ಎಂ. ರಾಜಶೇಖರ್, ಗೀತಾ ಶ್ರೀನಿವಾಸ ನಾಯಕ್ ,ನಟರಾಜ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.