ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಕಲ್ಪಿಸಿ: ಶಿವಣ್ಣ

Rashmi Kasaragodu
Updated On : 31 Jul 2013, 11:17 am

ಚಿಕ್ಕಮಗಳೂರು: ವಸತಿ ನಿಲಯಗಳಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನಹರಿಸುವಂತೆ ಪೂರಕ ವಾತಾವರಣವನ್ನು ನಿರ್ಮಾಣ ಮಾಡಬೇಕೆಂದು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶೃಂಗೇರಿ ಶಿವಣ್ಣ ಸೂಚನೆ ನೀಡಿದ್ದಾರೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾಜಿಕ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರದಿಂದ ಅನೇಕ ಹೊಸ ಯೋಜನೆಗಳನ್ನು ನೀಡುತ್ತಿದ್ದು, ಈ ಬಗ್ಗೆ ಸರ್ಕಾರದ ವತಿಯಿಂದ ನೀಡುವ ಸೌಲಭ್ಯಗಳನ್ನು ವಿದ್ಯಾರ್ಥಿನಿಲಯಗಳಲ್ಲಿ ಚಾರ್ಟ್ವನ್ನು  ಬರೆಸಬೇಕೆಂದ ಅವರು, ಅದರನ್ವಯ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಹಾಗೂ ಗುಣಮಟ್ಟದ ಆಹಾರವನ್ನು ನೀಡಬೇಕೆಂದರು.
ಹಾಸ್ಟೆಲ್ ವಾರ್ಡನ್ ನಿತ್ಯವೂ ಬೆಳಿಗ್ಗೆ ವಿದ್ಯಾರ್ಥಿಗಳನ್ನು ಬೇಗ ಏಳಿಸಿ ವಿದ್ಯಾಭ್ಯಾಸ ಮಾಡುವ ಹಾಗೆ ಪ್ರೇರೇಪಿಸಬೇಕು ಹಾಗೂ ಅವರಿಗೆ ನೈತಿಕ ಶಿಕ್ಷಣದ ಬಗ್ಗೆ ಒಲವು ಮೂಡಿಸಲು ನೀತಿ ಬೋಧಕತೆಗಳನ್ನು ಹೇಳಬೇಕು ಎಂದರು.
ಗಿರಿಜನ ಆಶ್ರಮ ಶಾಲೆಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಅಕ್ಷರ ದಾಸೋಹದಿಂದ ನೀಡಬೇಕೆಂದ ಅವರು, ವಿದ್ಯಾರ್ಥಿಗಳಿಗೆ ಶೀಘ್ರದಲ್ಲಿಯೇ ಸಮವಸ್ತ್ರಗಳನ್ನು ವಿತರಿಸಲಾಗುವುದು ಎಂದು ಹೇಳಿದರು. ಹಾಸ್ಟೆಲ್ಗಳಿಗೆ ನೂತನ ಪರಿಕರಗಳನ್ನು ನೀಡಲಾಗುತ್ತಿದ್ದು, ಹಳೆಯದಾದ ಪರಿಕರಗಳನ್ನು ಇ- ಟೆಂಡರ್ ಮುಖಾಂತರ ಹರಾಜು ಮಾಡಲಾಗುವುದು. ಜಿಲ್ಲೆಯ ಎಲ್ಲಾ ಸರಕಾರಿ ವಿದ್ಯಾರ್ಥಿ ನಿಲಯಗಳ ಸಿಬ್ಬಂದಿ ವರ್ಗದವರಿಗೆ ಹಾಸ್ಟೆಲ್ಗಳ ನಿರ್ವಹಣೆ ಬಗ್ಗೆ ಕಾರ್ಯಾಗಾರವನ್ನು ನಡೆಸಲಾಗುವುದು ಎಂದರು.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗಾಗಿಯೇ ನೀಡಿರುವ ಆಟಿಕೆಗಳನ್ನು ಬಳಕೆಗೆ ಕೊಡುತ್ತಿಲ್ಲವೆಂದು ಹೆಚ್ಚಿನ ದೂರುಗಳು ಬರುತ್ತಿದ್ದು, ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಗಮನಹರಿಸಬೇಕು ಎಂದ ಅವರು,   ಹಾಸ್ಟೆಲ್ಗಳ ಕಟ್ಟಡಗಳ ಮೂಲ ಸೌಕರ್ಯಗಳ ನಿರ್ವಹಣೆಗೆ 25.74 ಲಕ್ಷ ಅನುದಾನ ನೀಡಲಾಗುವುದು ಎಂದರು.
ಭಾಗ್ಯ ರಂಗನಾಥ್, ಜ್ಯೋತಿ ಹೇಮಶೇಖರ್, ಕವಿತ ಚಂದ್ರು, ಕವಿತಾ ಬೆಳ್ಳಿಪ್ರಕಾಶ್, ಹೇಮಾವತಿ ಕೃಷ್ಣಪ್ಪ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement