ಸೌಲಭ್ಯಗಳು ಎಲ್ಲರಿಗೂ ತಲುಪಬೇಕು
ತರೀಕೆರೆ: ವಿವಿಧ ಸೌಲಭ್ಯಗಳು ಎಲ್ಲರಿಗೂ ತಲುಪಿಸಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಟಿ.ಎಂ. ವೆಂಕಟೇಶ್ ತಿಳಿಸಿದ್ದಾರೆ.
ವಾಸವಿ ಸ್ನೇಹಕೂಟ ಬೆಂಗಳೂರು ವತಿಯಿಂದ ಪಟ್ಟಣದ ನಾಗಪ್ಪ ಕಾಲೋನಿ ಸ.ಹಿ.ಪ್ರಾ.ಶಾಲೆಯಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ, ನೋಟ್ ಬುಕ್ ವಿತರಣೆಯಿಂದ ಅನೇಕ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಯುವಕವಿ ದಾದಾಪೀರ್ ಮಾತನಾಡಿ, ಸಮಾಜಮುಖಿಯಾಗಿ ಬದುಕಬೇಕು, ಪರರಿಗೆ ಸಹಾಯ ಮಾಡಬೇಕು ಎಂದು ತಿಳಿಸಿದರು. ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ, ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಶಾಲೆ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ, ಕ್ರೀಡೆಯಲ್ಲಿ ಒಳ್ಳೆಯ ಸಾಧನೆ ಮಾಡುತ್ತಿದ್ದಾರೆ, ಶಾಲೆಗೆ ಉತ್ತಮ ಪ್ರಶಸ್ತಿ ದೊರಕಿದೆ ಎಂದು ತಿಳಿಸಿದರು.
ವಾಸವಿ ಸಮಾಜದ ಅಧ್ಯಕ್ಷ ಶಾಂತಕುಮಾರ್ ಶ್ರೇಷ್ಠಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೃಷ್ಣಮೂರ್ತಿ, ಪುರಸಭೆ ಸದಸ್ಯೆ ಸುನೀತ ಗಂಗಾಧರ್, ಮಂಜುನಾಥ್, ವೇಣುಪ್ರಿಯ, ಗಿರಿರಾಜ್, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ ವಿತರಿಸಲಾಯಿತು.