ಇಂದಿನಿಂದ ಹೆಚ್ಚುವರಿ ಶಿಕ್ಷಕರ ಸ್ಥಳಾಂತರ ಪ್ರಕ್ರಿಯೆ
ಚಿಕ್ಕಮಗಳೂರು: ಸರ್ಕಾರಿ ಪ್ರೌಢಶಾಲೆಗಳ ಹೆಚ್ಚುವರಿ ಶಿಕ್ಷಕರನ್ನು ಮತ್ತು ಹೆಚ್ಚುವರಿ ಖಾಲಿ ಹುದ್ದೆಗಳನ್ನು ಗುರುತಿಸಿ ಸ್ಥಳಾಂತರಿಸುವ ಪ್ರಕ್ರಿಯೆ ಆ.1 ರಿಂದ 26 ರವರೆಗೆ ನಡೆಯಲಿದೆ. ಆ.1 ರಿಂದ 3 ರವರೆಗೆ ಹೆಚ್ಚುವರಿ ಶಿಕ್ಷಕರ ಹುದ್ದೆ ಗುರುತಿಸುವ ಹಾಗೂ ಶಿಕ್ಷಕರ ಅಗತ್ಯವಿರುವ ಶಾಲೆಗಳನ್ನು ಗುರುತಿಸಿ ಆನ್ಲೈನ್ನಲ್ಲಿ ಡಾಟಾ ಎಂಟ್ರಿ ಮಾಡಿ ವ್ಯಾಲಿಡೇಶನ್ಗೊಳಿಸಲಾಗುವುದು. ಆ.5 ರಂದು ಅಗತ್ಯವಿರುವ ಹುದ್ದೆಗಳ ವೇಳಾಪಟ್ಟಿಯನ್ನು ಉಪ ನಿರ್ದೇಶಕರಿಂದ ಅನುಮೋದಿಸಲಾಗುವುದು. 7 ರಂದು ಖಾಲಿ ಹಾಗೂ ಹೆಚ್ಚುವರಿ ಶಿಕ್ಷಕರ ಅವಶ್ಯಕತೆಗಳ ಶಾಲಾ ಪಟ್ಟಿ ಪ್ರಕಟಿಸಲಾಗುವುದು, 9 ರಂದು ಹೆಚ್ಚುವರಿ ಶಿಕ್ಷಕರ ತಾತ್ಕಾಲಿಕ ಪಟ್ಟಿ ಪ್ರಕಟಗೊಳ್ಳಲಿದೆ. 15 ರಂದು ಶಿಕ್ಷಕರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದು, ಅವುಗಳ ಪರಿಶೀಲನೆ 16 ರಂದು ನಡೆಯಲಿದೆ. ಹೆಚ್ಚುವರಿ ಶಿಕ್ಷಕರ ಅಂತಿಮ ಪಟ್ಟಿ 18 ರಂದು ಪ್ರಕಟಿಸಲಾಗುವುದು. ಹೆಚ್ಚುವರಿ ಖಾಲಿ ಹುದ್ದೆಗಳ ಸ್ಥಳಾಂತರ 20 ರಂದು ನಡೆಯಲಿದೆ.
ಆ.22 ರಿಂದ 24 ರವರೆಗೆ ಬ್ಲಾಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ ನಡೆಸಿ, ಆದೇಶ ಹೊರಡಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನಸ್ಪಂದನ
ಜಿಲ್ಲಾಡಳಿತ, ಜಿಲ್ಲಾ ಮತ್ತು ತಾಪಂ ಸಹಯೋಗದೊಂದಿಗೆ ಚಿಕ್ಕಮಗಳೂರು ತಾಲೂಕು, ಜಾಗರ ಹೋಬಳಿ ವ್ಯಾಪ್ತಿಯ ಮೇಲಿನಹುಲುವತ್ತಿ, ಗ್ರಾಪಂನ ಜನಸ್ಪಂದನ ಕಾರ್ಯಕ್ರಮ ಶಾಸಕ ಸಿ.ಟಿ. ರವಿ ಅಧ್ಯಕ್ಷತೆಯಲ್ಲಿ ಆ.3 ರಂದು ಬೆಳಿಗ್ಗೆ 11 ಗಂಟೆಗೆ ಕೊಳಗಾಮೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯಲಿದೆ.
ಅರ್ಜಿ ಆಹ್ವಾನ
ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ನಡೆಯಲಿರುವ ಪ್ರಸ್ತುತ ಸಾಲಿನ ಕೃಷಿ ಮೇಳದಲ್ಲಿ ರಾಜ್ಯ ಮಟ್ಟದ ಡಾ. ಎಂ.ಎಚ್. ಮರೀಗೌಡ ತೋಟಗಾರಿಕಾ ರೈತ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ತೋಟಗಾರಿಕಾ ಕೃಷಿಯನ್ನು ಮಾಡುತ್ತಿರುವ ಆಸಕ್ತ ರೈತ ಅಥವಾ ರೈತ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 25 ಕೊನೆಯ ದಿನ, ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಮೂಡಿಗೆರೆಯ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.
ತಾಪಂ ಕೆಡಿಪಿ ಸಭೆ
ಚಿಕ್ಕಮಗಳೂರು ತಾಪಂ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ಪ್ರಥಮ ತ್ರೈಮಾಸಿಕ ಕೆಡಿಪಿ ಸಭೆ ಆ.12 ರಂದು ಬೆಳಿಗ್ಗೆ 11 ಗಂಟೆಗೆ ತಾಪಂ ಸಭಾಂಗಣದಲ್ಲಿ ಶಾಸಕರಾದ ರವಿ, ಜೀವರಾಜ್ ಹಾಗೂ ನಿಂಗಯ್ಯ ಉಪಸ್ಥಿತಿಯಲ್ಲಿ ನಡೆಯಲಿದೆ.