ಗ್ರಾಪಂ ಮಹಿಳಾ ಸದಸ್ಯರ ಹಿತರಕ್ಷಣೆಗೆ 'ಸುಗ್ರಾಮ'
ಕ.ಪ್ರ.ವಾರ್ತೆ, ಕಡೂರು, ಜು.31
ಗ್ರಾಪಂಗಳಲ್ಲಿ ಮಹಿಳಾ ಸದಸ್ಯರು ಸಮರ್ಥವಾಗಿ ಅಧಿಕಾರ ಚಲಾಯಿಸುವ ಮೂಲಕ ಸ್ವಾವಲಂಬಿಯಾಗಿ ಬೆಳೆಯಲು ಅವರಿಗೆ ಸರ್ಕಾರದಿಂದ ದೊರಕಬಹುದಾದ ಸವಲತ್ತು ಸಿಗುವ ನಿಟ್ಟಿನಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಸುಗ್ರಾಮ ಶ್ರಮ ವಹಿಸುತ್ತಿದೆ ಎಂದು ಕಡೂರು ತಾಲೂಕು ಗ್ರಾಪಂ ಚುನಾಯಿತ ಜನಪ್ರತಿನಿಧಿಗಳ ಸಂಘ ಹೇಳಿದೆ.
ಕಡೂರು ಪಟ್ಟಣದ ರೋಟರಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷೆ ಸುನಿತಾ ಜಗದೀಶ್, 3 ವರ್ಷದ ಹಿಂದೆ ತಾಲೂಕು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಆರಂಭಗೊಂಡ ಸುಗ್ರಾಮ ಸಂಘ ರಾಜ್ಯದ 17 ಜಿಲ್ಲೆಗಳಲ್ಲಿ ಸಂಘಟಿತವಾಗಿ ಬೆಂಗಳೂರನ್ನು ಕೇಂದ್ರ ಸ್ಥಾನ ಮಾಡಿಕೊಂಡಿದೆ ಎಂದರು.
ಸಮಾನ ಅಧಿಕಾರ: ಮಹಿಳಾ ಸದಸ್ಯರ ಮೇಲೆ ನಡೆಯುವ ದೌರ್ಜನ್ಯ ಖಂಡಿಸುವ ಮೂಲಕ ಮಹಿಳಾ ಸದಸ್ಯರಿಗೆ ನ್ಯಾಯ ಸಿಗಬೇಕು ಹಾಗೂ ಅಧಿಕಾರದಲ್ಲಿ ಪುರುಷರಷ್ಟೇ ಸಮಾನವಾಗಿ ಅಧಿಕಾರ ಹಂಚಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಒತ್ತಾಸೆಯಾಗಿ ಕೆಲಸ ಮಾಡುತ್ತಿದೆ ಎಂದವರು ಹೇಳಿದರು.
ಕಡೂರು ತಾಲೂಕಿನ ಕೆಲವು ಕಡೆ ಸರ್ಕಾರದ ಅನ್ನಭಾಗ್ಯ ಯೋಜನೆ ನ್ಯಾಯಬೆಲೆ ಅಂಗಡಿಗಳಲ್ಲಿ ದುರುಪಯೋಗವಾಗುವ ಮೂಲಕ ಜಡ ಜನರಿಗೆ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿ, ಕೆಲವು ಅಂಗಡಿಗಳಲ್ಲಿ 30ಕೆ.ಜಿ. ನೀಡಬೇಕಾದ ಅಕ್ಕಿ ನೀಡದೆ 28,29 ಕೆ.ಜಿ ನೀಡಲಾಗುತ್ತಿದೆ. ವಿ.ಯರದಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಅಂಗಡಿಗಳಲ್ಲಿ ರು. 5 ಹೆಚ್ಚಿಗೆ ವಸೂಲು ಮಾಡಲಾಗುತ್ತಿದೆ. ಸಿಂಗಟಗೆರೆಯಲ್ಲಿ 35 ವಸೂಲಿ ಮಾಡಿ, 30 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ.
ಕೆಲವೆಡೆ ಬಯೋವುಟ್ರಿಕ್ ಅಳವಡಿಕೆ ಮಾಡದೇ ಮನಸ್ಸಿಗೆ ಬಂದಂತೆ ಆಹಾರ ವಿತರಿಸಲಾಗುತ್ತಿದೆ. ಎಪಿಎಲ್ ಕಾರ್ಡ್ದಾರರಿಗೆ ದರ ನಿಗದಿಪಡಿಸಬೇಕು ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ನಡೆಯುತ್ತಿರುವ ದುರುಪಯೋಗ ತಡೆಗಟ್ಟಬೇಕು ಎಂದು ಕೋರಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ವಿವಿಧ ಕಾರ್ಯಕ್ರಮ: ಸಂಘ ಕಡೂರು ತಾಲೂಕಿನ ವಕ್ಕಲಗೆರೆಯಲ್ಲಿ ಕಳೆದ ವರ್ಷ ಬಾಲ್ಯವಿವಾಹ ತಡೆಗಟ್ಟಿದೆ. ಮಹಿಳೆಯರಿಗೆ ಉದ್ಯೋಗ ತರಬೇತಿ ಕಾರ್ಯಾಗಾರ ಸೇರಿದಂತೆ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಸುಗ್ರಾಮದಿಂದ ವಿವಿಧ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಸುನಿತಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಕಸನ ಸಂಸ್ಥೆ ತರಬೇತುದಾರ ಶ್ರೀನಿವಾಸ್, ಸಂಯೋಜಕ ದಯಾನಂದ್, ಸಂಘದ ಉಪಾಧ್ಯಕ್ಷೆ ರಾಜಮ್ಮ, ಕಾರ್ಯದರ್ಶಿ ರತ್ನಮ್ಮ, ಪದಾಧಿಕಾರಿ ಪುಷ್ಪ, ಶೈಲಜಾ, ಭಾಗ್ಯಮ್ಮ, ಲಕ್ಷ್ಮೀಬಾಯಿ, ಚಂದ್ರಮ್ಮ ಸೇರಿದಂತೆ ಅನೇಕ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.