ದಲಿತರ ವಿರುದ್ಧ ದೌರ್ಜನ್ಯ: ದಸಂಸ ಆರೋಪ
ಚಿಕ್ಕಮಗಳೂರು: ತರೀಕೆರೆ ಮತ್ತು ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ದಲಿತರ ಮೇಲೆ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ತಕ್ಷಣ ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಎನ್. ವೆಂಕಟೇಶ್, ತರೀಕೆರೆಯಲ್ಲಿ ಇತ್ತಿಚೆಗೆ ದಲಿತರಾದ ಹೆಚ್.ಹೆಚ್. ರವಿ ಎಂಬುವವರ ಮೇಲೆ ಸವರ್ಣೀಯರು ಜಾತಿಗೆ ಸೇರಿದ ವ್ಯಕ್ತಿಯೋರ್ವರು ದೌರ್ಜನ್ಯ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದರೂ ಪೊಲೀಸರು ಆರೋಪಿಯನ್ನು ಬಂಧಿಸದೇ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಮಾನಭಂಗಕ್ಕೆ ಯತ್ನ: ಚಿಕ್ಕಮಗಳೂರಿನ ಕಲ್ಯಾಣನಗರದಲ್ಲಿ ಇತ್ತೀಚೆಗೆ ದಲಿತ ಮಹಿಳೆ ಜ್ಯೋತಿ ಎಂಬುವವರನ್ನು ಸವರ್ಣೀಯ ಯುವಕನೋರ್ವ ಬೆದರಿಸಿ ಆಕೆಯ ಮಾನಭಂಗ ಮಾಡಿದ್ದು ಈ ಪ್ರಕರಣ ಸಹ ದಾಖಲಾಗಿದ್ದರೂ ಪೊಲೀಸರು ಆತನನ್ನು ಇದುವರೆಗೆ ಬಂಧಿಸಿಲ್ಲ ಎಂದು ದೂರಿದರು.
ಪೊಲೀಸರು ಆರೋಪಿಯನ್ನು ಬಂಧಿಸದೇ ಇರುವುದರಿಂದಾಗಿ ಆತ ಜ್ಯೋತಿಯವರಿಗೆ ಮೊಕದ್ದಮೆಯನ್ನು ಹಿಂಪಡೆಯುವಂತೆ ಕೊಲೆ ಬೆದರಿಕೆ ಹಾಕುತ್ತಿದ್ದಾನೆ ಎಂದ ಅವರು, ತಕ್ಷಣ ಈ ಇಬ್ಬರೂ ಆರೋಪಿಗಳನ್ನು ಬಂಧಿಸಬೇಕು, ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು, ನೊಂದವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.
ಅಪರ ಜಿಲ್ಲಾಧಿಕಾರಿ ಬಾಲಚಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು. ದಸಂಸ ತಾಲೂಕು ಸಂಚಾಲಕ ಮರ್ಲೆ ಅಣ್ಣಯ್ಯ, ಶ್ರೀಗಂಗಾ, ಅಧ್ಯಕ್ಷ ವಿ. ಧರ್ಮೇಶ್, ಶಶಿಕಲಾ, ಸುಮಿತ್ರಮ್ಮ, ಎಸ್.ಎನ್. ಮಹೇಂದ್ರಸ್ವಾಮಿ, ಅಬ್ದುಲ್ ರೆಹಮಾನ್, ಮೃತ್ಯುಂಜಯ, ಜಿ. ರಾಜು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.