ರಸ್ತೆ ಅಭಿವೃದ್ಧಿಗೆ ಒತ್ತಾಯ
ಕ.ಪ್ರ.ವಾರ್ತೆ, ತರೀಕೆರೆ, ಜು.31
ತರೀಕೆರೆ ಭಾಗದ ಅಚ್ಚುಕಟ್ಟು ರೈತರು ವತಿಯಿಂದ ಬುಧವಾರ ಪಟ್ಟಣದ ರೈತರು ಸಾರ್ವಜನಿಕರ ಹೊಲ, ಮನೆಗಳಿಗೆ ಹೋಗುವ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ಏರ್ಪಡಿಸಲಾಗಿತ್ತು.
ಸಾಲುಮರದಮ್ಮನವರ ದೇವಸ್ಥಾನದಿಂದ ಮಿನಿವಿಧಾನಸೌಧದವರೆಗೆ ಮೆರವಣಿಗೆ ಏರ್ಪಡಿಸಲಾಗಿತ್ತು. ಕೆಪಿಸಿಸಿ ಸದಸ್ಯ ಟಿ.ವಿ. ಶಿವಶಂಕರಪ್ಪ, ಟಿ.ಎಸ್. ಬಸವರಾಜ್, ಸೋಮಣ್ಣ, ಪುಟ್ಟಣ್ಣ, ತಿಮ್ಮಣ್ಣ, ಬಾಬು, ಮೋಹನ್, ಪಟ್ಟಣದ ರೈತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
40 ಸಾವಿರ ಜನಸಂಖ್ಯೆ: ಮೆರವಣಿಗೆ ನಂತರ ಮಿನಿ ವಿಧಾನಸೌಧದ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಕೆಪಿಸಿಸಿ ಸದಸ್ಯ ಟಿ.ವಿ. ಶಿವಶಂಕರಪ್ಪ ಮಾತನಾಡಿ, ತರೀಕೆರೆ ಪಟ್ಟಣ ಕಂದಾಯ ಉಪವಿಭಾಗ ನಗರವಾಗಿದ್ದು, ಸುಮಾರು 40 ಸಾವಿರ ಜನಸಂಖ್ಯೆ ಇರುವ ಪಟ್ಟಣವಾಗಿದೆ ಎಂದು ಹೇಳಿದರು.
ಇವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕೂಲಿ ಕಾರ್ಮಿಕರಾಗಿರುತ್ತಾರೆ. ದಿನನಿತ್ಯ ಸಾವಿರಾರು ಜನ ರೈತರು, ಕೂಲಿ ಕಾರ್ಮಿಕರು ಮತ್ತು ದನಕರುಗಳು ಓಡಾಡುವ ಜಮೀನುಗಳ ಸಂಪರ್ಕ ರಸ್ತೆಗಳು ತೀವ್ರತರವಾಗಿ ಹಾಳಾಗಿದ್ದು, ದಿನನಿತ್ಯದ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ.
ಪಟ್ಟಣದ ರೈತರು ಜಮೀನಿಗೆ ಸಂಚರಿಸುವ ಇತರ ರಸ್ತೆಗಳು ಕೂಡ ಹಾಳಾಗಿದ್ದು, ಎತ್ತು ಗಾಡಿ ಜನಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಕೂಡಲೇ, ಸಂಬಂಧಿಸಿದ ಇಲಾಖೆ ಪಟ್ಟಣದ ರೈತರು ಸಾರ್ವಜನಿಕರು ಹೊಲಗಳಿಗೆ ಓಡಾಡುವ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. 1 ತಿಂಗಳಲ್ಲಿ ಈ ಮನವಿ ಪತ್ರಕ್ಕೆ ಸ್ಪಂದಿಸಬೇಕೆಂದು ಅವರು ಆಗ್ರಹಿಸಿದರು.
ಚೆಕ್ಡ್ಯಾಂ: ಪಟ್ಟಣ ಮತ್ತು ಸುತ್ತಮುತ್ತ ಬೀಳುತ್ತಿರುವ ಮಳೆಯ ನೀರು ಗುಡ್ಡದ ಮೇಲಿಂದ ಹಳ್ಳಗಳ ಮುಖಾಂತರ ಹರಿದು ಸುಮ್ಮನೆ ಹೋಗುವುದರಿಂದ ಉಪಯೋಗವಾಗುವುದಿಲ್ಲ. ಚೆಕ್ಡ್ಯಾಂ ನಿರ್ಮಿಸಿ ಅಂತರ್ಜಲ ಹೆಚ್ಚಿಸಬೇಕು. ರೈತರ ಪಂಪುಸೆಟ್ಟುಗಳಿಗೆ ವಿದ್ಯುತ್ ಸಂಪರ್ಕ ಪೂರೈಸುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ ಅವರು, ರೈತರ ಎಲ್ಲಾ ಸಮಸ್ಯೆ ಬಗೆಹರಿಸಿಕೊಡಬೇಕೆಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳಿಗೆ ಎಸಿ ಮೂಲಕ ಮನವಿ ಸಲ್ಲಿಸಲಾಯಿತು.