ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಮಾಜ ಅಭಿವೃದ್ಧಿಗೆ ಪತ್ರಿಕೋದ್ಯಮದ ಕೊಡುಗೆ ಅಪಾರ

Lingaraj Badiger
Updated On : 1 Aug 2013, 10:53 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು,  ಜು.31
ಸಮಾಜದ ಆಗು ಹೋಗುಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂಲಕ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಪತ್ರಿಕೋದ್ಯಮ ನೀಡುತ್ತಿರುವ ಕೊಡುಗೆ ಅಪಾರ ಎಂದು ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅವರು ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘ ನಗರದ ವರ್ತಕರ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೋದ್ಯಮದ ಮಹತ್ವವನ್ನು ಅರಿತೇ ಅದನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂದು ಕರೆಯಲಾಗುತ್ತಿದೆ ಎಂದರು. ಕ್ರಿಯಾಶೀಲತೆ ಇರುವ ಕಡೆ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ. ಅಂತೆಯೇ ಪತ್ರಕರ್ತರು ಕ್ರಿಯಾಶೀಲರಾಗಿರುವುದರಿಂದ ಅವರು ಎಂದಿಗೂ ಪ್ರಚಲಿತರಾಗಿರುತ್ತಾರೆ ಎಂದರು.
ಪತ್ರಿಕೆಗಳ ಕೊಡುಗೆ ಅಪಾರ: ಸಾಮಾಜಿಕ ಸಮಸ್ಯೆಗಳು ಮತ್ತು ಪತ್ರಿಕೋದ್ಯಮ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್.ಎಂ. ರುದ್ರಸ್ವಾಮಿ, ಭಾರತ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಕರ್ತರು ಹಾಗೂ ಪತ್ರಿಕೆಗಳ ಕೊಡುಗೆ ಅಪಾರವಾಗಿತ್ತು ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್ ಸೇರಿದಂತೆ ಹಲವರು ಪತ್ರಕರ್ತರಾಗಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿದ್ದವರಲ್ಲಿ ಬಹುತೇಕ ಜನರು ಅನಕ್ಷರಸ್ಥರಾಗಿದ್ದರು. ಅವರಿಗೆ ಓದಲೂ ಬರುತ್ತಿರಲಿಲ್ಲ. ಅಂತಹ ದಿನಗಳಲ್ಲೇ ಪತ್ರಕರ್ತರು ಸಾಕಷ್ಟು ಸೇವೆಯನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಹೊಸ ರೂಪ: ಪತ್ರಕರ್ತರಾದವರಿಗೆ ಪದವಿಯ ಅಗತ್ಯವಿಲ್ಲ. ಪದವಿಯನ್ನು ಪಡೆಯದವರೂ ದೇಶದಲ್ಲಿ ಸಾಕಷ್ಟು ಹೆಸರನ್ನು ಮಾಡಿದ್ದಾರೆ. ಪತ್ರಕರ್ತರಾದವರು ಪದವಿಯನ್ನು ಮಾಡಿದ್ದರೆ ಒಳ್ಳೆಯದೇ ಆದರೂ ಅದು ಇರಲೇಬೇಕು ಎಂದಿಲ್ಲ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಸಮಸ್ಯೆಗಳು ಹೊಸ ರೂಪಗಳನ್ನು ಪಡೆದುಕೊಳ್ಳುತ್ತಿವೆ. ಸಾಮಾಜಿಕ ಸುಧಾರಣೆಯಾಗಬೇಕೆಂದರೆ ಇದರಲ್ಲಿ ಪತ್ರಿಕೆಗಳ ಪಾತ್ರ ಬಹಳ ಪ್ರಮುಖವಾಗಿದೆ ಎಂದರು.
ದೇಶದಲ್ಲಿರುವ ಸ್ಥಳೀಯ ಭಾಷೆಗಳ ಪತ್ರಿಕೆಗಳು ಇಂಗ್ಲಿಷ್ ಪತ್ರಿಕೆಗಳಿಂದ ಸ್ಪೂರ್ತಿ ಪಡೆದವೇ ಆಗಿವೆ. ಆದರೆ, ಇಂಗ್ಲಿಷ್ ಪತ್ರಿಕೆಗಳು ದೇಶದ ಗ್ರಾಮೀಣ ಪ್ರದೇಶಗಳ ಜನರನ್ನು ತಲುಪುವಲ್ಲಿ ವಿಫಲವಾಗಿವೆ. ಇಂದಿಗೂ ಗ್ರಾಮೀಣ ಪ್ರದೇಶಗಳ ಜನರು ಒಪ್ಪುವುದು ಸ್ಥಳೀಯ ಭಾಷೆಗಳ ಪತ್ರಿಕೆಗಳನ್ನೇ. ಅಲ್ಲದೆ ಗ್ರಾಮೀಣ ಪ್ರದೇಶಗಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸ್ಥಳೀಯ ಪತ್ರಿಕೆಗಳು ಸಾಕಷ್ಟು ಯಶಸ್ವಿಯಾಗಿವೆ.
ಭಾರತದ ಇಂಗ್ಲಿಷ್ ಟಿ.ವಿ. ಮಾಧ್ಯಮಗಳಲ್ಲಿ ಉತ್ತಮವಾಗಿ ವರದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಆದರೆ, ಅವು ಗ್ರಾಮಾಂತರ ಮಟ್ಟದ ಸಾಧಾರಣ ಜನರಿಗೆ ಇನ್ನೂ ತಳಿದುಕೊಳ್ಳುವ ಆಸಕ್ತಿ ಮೂಡುವಂತಾಗಬೇಕು ಎಂದು ಅವರು ಹೇಳಿದರು.
ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ ಮಾತನಾಡಿ, ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಸರಿಸಮಾನವಾಗಿ ಪತ್ರಿಕೋದ್ಯಮವೂ ಬೆಳೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದಲ್ಲಿಯೂ ಪತ್ರಿಕೆಗಳು ದೊರೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಕ್ತಿಧಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾಗ್ಯಮ್ಮ, ಚಮ್ಮಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಎಸ್. ರಾಜು, ಮಲ್ಲೇಗೌಡ ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷಾ ಕಾರ್ಯ ನಿರ್ವಹಿಸುತ್ತಿರುವ ನಾಗರಾಜ್, ನಿವೃತ್ತ ಶಿಕ್ಷಕಿ ಶಿವಲಿಂಗಮ್ಮ, ನಾಟಿ ವೈದ್ಯ ಮೊಹಮದ್ ಜಾಫರ್ ಅವರನ್ನು ಸನ್ಮಾನಿಸಲಾಯಿತು.
ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಎನ್. ತೆರದಾಳ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ದಿನೇಶ್ ಪಟವರ್ಧನ್, ರಾಷ್ಟ್ರೀಯ ಮಂಡಳಿ ಸದಸ್ಯ ಬಿ.ಎನ್. ಸತ್ಯನಾರಾಯಣ್, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿಕೆ. ಜಯಕುಮಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement