1.80 ಕೋಟಿ ಕಾಮಗಾರಿಗೆ ಅನುಮೋದನೆ
ಮೂಡಿಗೆರೆ: ತಾಲೂಕಿನ 29 ಗ್ರಾಮ ಪಂಚಾಯಿತ್ ಅಭಿವೃದ್ಧಿಗೆ 1.80 ಕೋಟಿ ಮೊತ್ತದ ಕಾಮಗಾರಿಗಳಿಗೆ ಕ್ರಿಯಾ ಯೋಜನೆಗಳನ್ನು ರೂಪಿಸಿ ಅನುಮೋದನೆ ಪಡೆಯಲಾಗಿದೆ ಎಂದು ತಾಲೂಕ್ ಪಂಚಾಯಿತ್ ಅಧ್ಯಕ್ಷ ಎಂ.ಎ. ಶೇಷಗಿರಿ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, 2012-13 ನೇ ಸಾಲಿನಲ್ಲಿ 2.20 ಕೋಟಿ ಮೊತ್ತದ ಕ್ರಿಯಾ ಯೋಜನೆ ರೂಪಿಸಿ, ಅನುಮೋದನೆ ಪಡೆದಿದ್ದು, ಶೇ.ನೂರರಷ್ಟು ಕಾಮಗಾರಿ ಸಂಪೂರ್ಣವಾಗಿದೆ. ಈ ಸಾಲಿನಲ್ಲಿ 1.80 ಕೋಟಿ ಕ್ರಿಯಾ ಯೋಜನೆಯನ್ನು ಸರ್ಕಾರದ ಮಾರ್ಗ ಸೂಚಿಯಂತೆ ತಯಾರಿಸಲಾಗಿದ್ದು. ಶೇ.25 ರಷ್ಟು, ಪ.ಜಾತಿ, ಪ.ಪಂಗಡದ ಕಾಮಗಾರಿಗಳಿಗೆ ಮೀಸಲಿಟ್ಟಿದ್ದು, ಶೇ.3 ರಷ್ಟು ಅಂಗವಿಕಲರ ಕಾಮಗಾರಿಗಳಿಗೆ ಮೀಸಲಿರಿಸಲಾಗಿದೆ ಎಂದರು. ಈ ಕ್ರಿಯಾಯೋಜನೆಯಿಂದ ತಾಲೂಕಿನಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿದ್ದು. ಈಗ ತಯಾರಿಸಿರುವ ಕ್ರಿಯಾ ಯೋಜನೆಯು ಜಿ.ಪಂ.ಅನುಮೋದನೆ ಪಡೆದ ತಕ್ಷಣವೇ ಕಾಮಗಾರಿಗಳನ್ನು ನಡೆಸಲಾಗುವುದೆಂದು ತಿಳಿಸಿದರು.
ಸಹಕಾರ ಅಗತ್ಯ
ಸೊರಬ: ವಿವಾಹದ ಯಶಸ್ಸಿಗೆ ಪರಸ್ಪರ ಅರ್ಥೈಸಿಕೊಳ್ಳುವಿಕೆಯ ಮನೋಭಾವ ಅಗತ್ಯವಿದೆ ಎಂದು ಖ್ಯಾತ ಸಾಹಿತಿ ನಾ. ಡಿಸೋಜಾ ತಿಳಿಸಿದರು.
ತಾಲೂಕು ತಾಳಗುಪ್ಪ ಗ್ರಾಮದಲ್ಲಿ ಶುಕ್ರವಾರ ನಡೆದ ಸಾಮೂಹಿಕ ವಿವಾಹ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಬದುಕಿನ ಬಂಡಿಗೆ ಅಗತ್ಯ ಕೀಲುಗಳು ಗಂಡ ಮತ್ತು ಹೆಂಡತಿ. ಇಲ್ಲಿ ತಾರತಮ್ಯತೆಗಳ ಅಗತ್ಯವಿಲ್ಲ, ಇಲ್ಲಿ ಸೋಲು, ಗೆಲವು ಸಮಾನ, ಜೀವನದ ಪ್ರತಿ ಹಂತಗಳನ್ನು ಸಮಾನವಾಗಿ ಪ್ರೀತಿಸಿ ಒಬ್ಬರಿಗೊಬ್ಬರು ಬೆನ್ನೆಲುಬಾದಾಗ ವೈವಾಹಿಕ ಜೀವನ ಸಾರ್ಥಕಗೊಳ್ಳುತ್ತದೆ ಎಂದರು.