ಚುರುಕುಗೊಂಡ ಕೃಷಿ ಚಟುವಟಿಕೆ
ಬೀರೂರು: ಇತ್ತೀಚೆಗೆ ಸುರಿದ ಮಳೆ ರೈತರಲ್ಲಿ ಸಂಸತಸ ತಂದಿದ್ದು, ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.
ರೈತರು ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಖರೀದಿಯಲ್ಲಿ ತೊಡಗಿದ್ದಾರೆ.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ, ಸಂಪರ್ಕ ಕೇಂದ್ರದ ಅಧಿಕಾರಿ ಟಿ.ಸಿ. ಚಂದ್ರು ಹೋಬಳಿಯಲ್ಲಿ ಬಿತ್ತನೆಗಾಗಿ 110 ಕ್ವಿಂಟಾಲ್ ಶೇಂಗಾ 4.5 ಕ್ವಿಂಟಾಲ್ ಹೆಸರು, ಎರಡು ಕ್ವಿಂಟಾಲ್ ಉದ್ದು, 4.5 ಕ್ವಿಂಟಾಲ್ ಹಲಸಂದೆ, 2 ಕ್ವಿಂಟಾಲ್ ತೊಗರಿ, 15 ಕ್ವಿಂಟಾಲ್ ಮೆಕ್ಕೆಜೋಳ, 20 ಕ್ವಿಂಟಾಲ್, ಸೂರ್ಯಕಾಂತಿ ವಿತರಿಸಿದ್ದು ಕಾರ್ಯ ಪ್ರಗತಿಯಲ್ಲಿದೆ.
ಭೂ ಚೇತನ ಕಾರ್ಯಕ್ರಮಡಿಯಲ್ಲಿ ರೈತರಿಗೆ ಶೇ.50ರಷ್ಟು ಸಬ್ಸಿಡಿ ದರದಲ್ಲಿ ಜಿಪ್ಸಂ, ಜಿಂಕ್, ಸಲ್ಪೇಟ್ ಹಾಗೂ ಬೋರಾನ್ ವಿತರಿಸಲಾಗಿದೆ. ಹೋಬಳಿಯಲ್ಲಿ ಈ ಬಾರಿ ಮುಂಗಾರು ಪೂರ್ವದಲ್ಲಿ ಮಳೆ ಕೊರತೆಯಿಂದ ಎಳ್ಳು ಮತ್ತು ಹೆಸರು ಬೆಳೆಗಳು ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆಯಾಗಿಲ್ಲ. ಶೇಂಗಾ 300 ಎಕರೆ, ಸೂರ್ಯಕಾಂತಿ 1 ಸಾವಿರ ಹೆಕ್ಟೇರ್ ಮತ್ತು ಮೆಕ್ಕೆಜೋಳ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಅಂದಾಜಿದೆ. ಹೆಸರು 100 ರಿಂದ 140 ಹೆಕ್ಟೇರ್ ಮತ್ತು ಎಳ್ಳು ಬೆಲೆಯನ್ನು 300 ರಿಂದ ನಾನೂರು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ನಿರೀಕ್ಷೆಯಿದೆ.