ಜೀವಾತ್ಮ ಪರಮಾತ್ಮನೊಂದಿಗೆ ಜೋಡಿಸುವುದೇ ಶಿವದೀಕ್ಷೆ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.3
ಜೀವಾತ್ಮನನ್ನು ಪರಮಾತ್ಮನೊಂದಿಗೆ ಶಾಶ್ವತವಾಗಿ ಜೋಡಿಸುವ ಪವಿತ್ರ ಕೊಂಡಿ ಶಿವದೀಕ್ಷೆ ಎಂದು ಹರಿಹರಪುರ ಮಠದ ಮಠಾಧೀಶರಾದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಹೇಳಿದ್ದಾರೆ.
ಮೂಡಿಗೆರೆ ತಾಲೂಕು ಬಾಳೆಹೊಳೆ ಗ್ರಾಮದ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ತಲಗೋಡು ಸಮುಖ ಸೇವಾ ಪ್ರತಿಷ್ಠಾನ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ವಲಯ ಘಟಕಗಳ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ಜೀವನ ಜಾಗೃತಿ ಸಾಮೂಹಿಕ ಶಿವದೀಕ್ಷೆ ನೀಡಿ ಅವರು ಆಶೀರ್ವಚನ ನೀಡಿದರು.
ದೈವಾರಾಧನೆ ಅವಿಭಾಜ್ಯ ಅಂಗ: ದೈವಾರಾಧನೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ವಿದ್ಯೆ ಜೊತೆ ಬುದ್ಧಿಯೂ ನಮ್ಮದಾಗಬೇಕು. ಅರಿವಿನ ಕೊರತೆಯೇ ದುಃಖಕ್ಕೆ ಮೂಲಕಾರಣ. ಮನದ ಏಕಾಗ್ರತೆಗೆ ಧ್ಯಾನ ಸಹಕಾರಿ. ಪರಿಶುದ್ಧ ಭಕ್ತಿ, ಶ್ರದ್ಧೆ, ಅಪರಿಮಿತವಾದ ವಿಶ್ವಾಸವಿದ್ದರೆ ದೇವರು ಆನಂದ, ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸುತ್ತಾನೆ. ಸಾರ್ಥಕತೆ, ಸ್ವಾಭಿಮಾನ, ಸಂಘಟನೆ ಸಮಾನತೆಯನ್ನು ಬೆಳೆಸುವ ಪವಿತ್ರ ಕಾರ್ಯವೇ ಸಾಮೂಹಿಕ ಶಿವದೀಕ್ಷೆ. ಇದು ವ್ಯಕ್ತಿಯ ವ್ಯಕ್ತಿಗತ ಬದುಕಿಗೆ, ಪಾರಮಾರ್ಥಿಕ ಬದುಕಿಗೆ ಕುಟುಂಬದ ಶ್ರೇಯಸ್ಸಿಗೆ, ಸಮಷ್ಠಿಯ ಒಳಿತಿಗೆ ಸಹಕಾರಿ ಎಂದರು.
ಬದುಕು ಅಸ್ಥಿರ ಎಂಬುದು ಜೀವನದ ನಿತ್ಯ ಸತ್ಯ. 84 ಲಕ್ಷ ಜೀವಿಗಳಲ್ಲಿ ಮನುಷ್ಯನಿಗೆ ಮೊದಲ ಸ್ಥಾನವಿದೆ. ಈ ಶ್ರೇಷ್ಠತೆಯನ್ನು ಅರಿತು ಬದುಕದಿದ್ದರೆ ಅಮೂಲ್ಯ ಜೀವನ ವ್ಯರ್ಥ. ಪ್ರಕೃತಿಯ ಮೇಲೆ ನಮಗೆ ಹೆಚ್ಚಿನ ಸ್ವಾತಂತ್ರ್ಯ ಇದೆ. ನಮ್ಮ ಅನುಕೂಲಕ್ಕೆ ಬಳಕೆಗೆ ಅವಕಾಶವಿದೆ. ಪ್ರಕೃತಿಯ ಹಿಂದಿನ ಪುರುಷ ತತ್ವ ಅರಿಯುವ ಅಧಿಕಾರ ಮನುಷ್ಯನಿಗಿದೆ. ಮಾನವನಿಗೆ ಮಾತ್ರ ಬೌದ್ಧಿಕ ವಿಕಾಸ ಸಾಧ್ಯ ಎಂದು ಹೇಳಿದರು.
ಪರಸ್ಪರ ಸಹಕಾರ: ಭೂಮಿ, ಗಾಳಿ, ನೀರು, ಆಹಾರ ಎಲ್ಲವನ್ನೂ ಕೊಟ್ಟಿರುವ ದೇವಋಣ, ಜ್ಞಾನದ ಬೆಳಕು ಕೊಟ್ಟ ಋಷಿಗಳ ಋಣ, ಪರಸ್ಪರ ಸಹಕಾರ ನೀಡುತ್ತಿರುವ ಸಹಮಾನವರ ಋಣಗಳನ್ನು ತೀರಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದ ಸ್ವಾಮೀಜಿ, ಮಾನವರೆಲ್ಲರೂ ಮೂಲತಃ ಆತ್ಮ ಸ್ವರೂಪದ ಮಂಗಳ ಸ್ವರೂಪರು ಎಂದು ನುಡಿದರು.
ಸುಮುಖ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಸ್. ಗಜೇಂದ್ರ ಹೆಬ್ಬಾರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಜಯಕರ, ಬಾಳೆಹೊಳೆ ದೇವಸ್ಥಾನದ ವಹಿವಾಟುದಾರ ಬಿ.ವಿ. ರಮೇಶ್ ಮಾತನಾಡಿದರು.
ಮೂಡಿಗೆರೆ ತಾಲೂಕು ಪಂಚಾಯ್ತಿ ಅಧ್ಯಕ್ಷ ಶೇಷಗಿರಿ ಸೇರಿದಂತೆ ಸ್ಥಳೀಯ ಪ್ರಮುಖರಿಗೆ ಸ್ವಾಮೀಜಿ ಗುರುರಕ್ಷೆ ನೀಡಿದರು. ಬಾಳೆಹೊಳೆ ವೃತ್ತದಿಂದ ಸ್ವಾಮೀಜಿ ಅವರನ್ನು ಮಂಗಳವಾದ್ಯ, ಪೂರ್ಣ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಯಲ್ಲಿ ಸಭಾಮಂಟಪಕ್ಕೆ ಕರೆತರಲಾಯಿತು.
ಶಿವದೀಕ್ಷೆ ಪಡೆಯಬಹುದು: ಮಾಂಸಾಹಾರ, ಮದ್ಯಪಾನ ಮಾಡುವವರೂ ಶಿವದೀಕ್ಷೆ ಪಡೆಯಬಹುದು. ಅಶೌಚ, ಸೂತಕ, ಮೈಲಿಗೆ ಯಾವುದೂ ಶಿವದೀಕ್ಷೆಗೆ ಅಡ್ಡಿ ಅಲ್ಲ ಎಂದು ಹರಿಹರಪುರ ಮಠದ ಮಠಾಧೀಶರಾದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ನುಡಿದರು.
ಬಾಳೆಹೊಳೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರೂ ಸೇರಿದಂತೆ 300ಕ್ಕೂ ಹೆಚ್ಚು ಸ್ತ್ರೀ- ಪುರುಷರಿಗೆ ಶಾಸ್ತ್ರಬದ್ಧವಾಗಿ, ಸರಳವಾಗಿ ಶಿವದೀಕ್ಷೆ ನೀಡಿದ ಸ್ವಾಮೀಜಿ ಪಂಚಾಕ್ಷರಿ ಮಂತ್ರವನ್ನು ಉಪದೇಶಿಸಿ, ಕಾಶೀದಾರದಲ್ಲಿ ಶುದ್ಧ ರುದ್ರಾಕ್ಷಿಯನ್ನು ಹಾಕಿ ಕೊರಳಲ್ಲಿ ನಿತ್ಯ ಧರಿಸುವಂತೆ ಸೂಚಿಸಿ, ಶಿವದೀಕ್ಷೆ ಅನುಷ್ಠಾನಕ್ರಮ ಬೋಧಿಸಿ ಈ ಕುರಿತ ಕರಪತ್ರವನ್ನು ನೀಡಿದರು.
ಪಂಚಾಕ್ಷರಿಮಂತ್ರ ಸಕಲರಿಗೂ ಮಂಗಳವನ್ನುಂಟು ಮಾಡುವ ಶಿವನಿಗೆ ನಮಸ್ಕಾರ ಹೇಳುವುದಾಗಿದೆ. ಶ್ರದ್ಧೆಯಿಂದ ಜಪಿಸಿದರೆ ಸತ್ಪುರುಷರಾಗಿ ಪೂರ್ಣಾನುಗ್ರಹ ಹೊಂದಬಹುದು. ಮನಸ್ಸು ಸ್ವಚ್ಛ ನಿರ್ಮಲ- ಶುದ್ಧವಾಗಿ ನಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಧ್ಯಾನ ಸಹಕಾರಿ ಎಂದು ಸ್ವಾಮೀಜಿ ಉಪದೇಶಿಸಿದರು.