ಪೊಲೀಸರು ಆರೋಗ್ಯದ ಕಡೆ ಗಮನ ಹರಿಸಿ
ಕ.ಪ್ರ.ವಾರ್ತೆ, ನ.ರಾ.ಪುರ, ಜೂ.3
ಸದಾ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಗಮನ ಹರಿಸಬೇಕು ಎಂದು ಶಾಸಕ ಡಿ.ಎನ್. ಜೀವರಾಜ್ ತಿಳಿಸಿದರು.
ಪುಷ್ಪಾ ಆಸ್ಪತ್ರೆಯಲ್ಲಿ ಸಹ್ಯಾದ್ರಿ ಸ್ನೇಹಿತರ ಬಳಗ ಹಾಗೂ ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸದುಪಯೋಗವಾಗಲಿ: ಪೊಲೀಸರಿಗೆ ಆರೋಗ್ಯ ತಪಸಾಣೆ ಕಾರ್ಯಕ್ರಮ ಏರ್ಪಡಿಸಿರುವುದು ವಿಶೇಷವಾಗಿದೆ. ಪೊಲೀಸರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಕಾರ್ಯಕ್ರಮವನ್ನು ಪೊಲೀಸರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಆರಕ್ಷಕ ವೃತ್ತ ನಿರೀಕ್ಷಕ ಕೃಷ್ಣಮೂರ್ತಿ ಮಾತನಾಡಿ, ಪೊಲೀಸರು ತಮ್ಮ ಕರ್ತವ್ಯದ ಮಧ್ಯೆ ಆರೋಗ್ಯದ ಬಗ್ಗೆ ಗಮನ ಹರಿಸುವುದು ಕಡಿಮೆ. ಇದೊಂದು ಉತ್ತಮ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆರೋಗ್ಯವೇ ಭಾಗ್ಯ: ಸಹ್ಯಾದ್ರಿ ಸ್ನೇಹಿತರ ಬಳಗದ ಅಧ್ಯಕ್ಷ ಕೆ.ಜೆ. ಪೋಳಿ ಮಾತನಾಡಿ, ನಮ್ಮ ಸಂಘವು ಪೊಲೀಸರ ಸೇವೆಯನ್ನು ವಿಶೇಷ ಸೇವೆ ಎಂದು ಪರಿಗಣಿಸಿ ಅವರ ಸದೃಢ ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಇನ್ನೂ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂಬ ಉದ್ದೇಶದಿಂದ ವಿಶೇಷವಾಗಿ ಪೊಲೀಸ್ ಸಿಬ್ಬಂದಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಎಂದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಪುಷ್ಪಾ ಸೇವಾ ಸಮಾಜದ ಅಧ್ಯಕ್ಷ ಪಿ.ಜೆ. ಆಂಟೋನಿ ಮಾತನಾಡಿ, ಪೊಲೀಸ್ ಇಲಾಖೆಯ ಸೇವೆ ವಿಶೇಷವಾದ ಸೇವೆಯಾಗಿದೆ. ಸಮಯದ ಇತಿ ಮಿತಿ ಇಲ್ಲದೆ ಕೆಲಸದ ಒತ್ತಡಕ್ಕೆ ಸಿಲುಕಿ ತಮ್ಮ ಖಾಸಗಿ ಬದುಕನ್ನು ಬಲಿಕೊಟ್ಟು ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಪ್ರಯತ್ನಿಸುತ್ತಾರೆ. ಪೊಲೀಸರು ಆರೋಗ್ಯವಾಗಿದ್ದಾಗ ಮಾತ್ರ ಉತ್ತಮ ಸೇವೆ ಸ್ಲಲಿಸಲು ಸಾಧ್ಯ ಎಂದು ಹೇಳಿದರು.
ಸಭೆಯಲ್ಲಿ ಕೊಪ್ಪ ಡಿವೈಎಸ್ಪಿ ಡಾ. ಜಗದೀಶ್, ಪುಷ್ಪ ಆಸ್ಪತ್ರೆ ವೈದ್ಯರಾದ ಡಾ. ಮೇರಿ ಸೂಸನ್, ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವೈದ್ಯರಾದ ಡಾ. ವಿಶ್ವನಾಥ್, ಡಾ.ಆನಂದ್ ಉಪಸ್ಥಿತರಿದ್ದರು.
ಸಿಜು ಸ್ವಾಗತಿಸಿದರು. ಸನ್ನಿ ನಿರೂಪಿಸಿ, ರಂಜಿತಾ ವಂದಿಸಿದರು.