ಗುಟ್ಕಾ ನಿಷೇಧ ಆತುರದ ನಿರ್ಧಾರ: ಜೀವರಾಜ್
ಕ.ಪ್ರ.ವಾರ್ತೆ, ನ.ರಾ.ಪುರ, ಜೂ.4
ಸಿದ್ದರಾಮಯ್ಯ ಸರ್ಕಾರವು ಗುಟ್ಕಾ ನಿಷೇಧ ಮಾಡುವ ನಿರ್ಧಾರ ತೆಗೆದುಕೊಂಡಿರುವುದು ಆಘಾತ ಹಾಗೂ ಆಶ್ಚರ್ಯ ಉಂಟು ಮಾಡಿದೆ ಎಂದು ಮಾಜಿ ಸಚಿವ ಡಿ.ಎನ್. ಜೀವರಾಜ್ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುಟ್ಕಾ ಸಂಪೂರ್ಣ ನಿಷೇಧ ಮಾಡುವ ಬದಲಿಗೆ ಅದರಲ್ಲಿನ ವಿಷಕಾರಕ ವಸ್ತು ಇದ್ದರೆ ಅದನ್ನು ಮಾತ್ರ ನಿಷೇಧಿಸಬಹುದಿತ್ತು. ಅಡಕೆಗೆ ಕರ್ನಾಟಕ ತಾಯಿ ನೆಲ ಇದ್ದ ಹಾಗೆ.ದೇಶದ ಒಟ್ಟು ಉತ್ಪಾದನೆಯಲ್ಲಿ ರಾಜ್ಯದಲ್ಲಿ ಶೇ. 50 ಅಡಕೆ ಬೆಳೆಯಲಾಗುತ್ತದೆ ಎಂದರು.
ರಾಜ್ಯದವರೇ ಅಧಿಕ: ದೇಶದ ಅಸ್ಸಾಂ, ಕೇರಳ, ಉತ್ತರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಅಡಿಕೆ ಬೆಳೆಯುತ್ತಿದ್ದರೂ ಅಧಿಕ ಬೆಳೆಗಾರರು ಕರ್ನಾಟಕ ರಾಜ್ಯದವರೇ ಆಗಿದ್ದಾರೆ. ರಾಜ್ಯದ 6 ರಿಂದ 7 ಜಿಲ್ಲೆಯಲ್ಲಿ ಅಡಕೆಯನ್ನೇ ನಂಬಿ ಬದುಕಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಕನಿಷ್ಠ ಅಡಕೆ ಬೆಳೆಗಾರರ ಸಭೆ ಕರೆದು ಚರ್ಚೆ ನಡೆಸಬಹುದಿತ್ತು. ಇದು ಆತುರದ ನಿರ್ಧಾರವಾಗಿದೆ ಎಂದು ಆರೋಪಿಸಿದರು.
ಸರ್ಕಾರ ಸಿಗರೇಟು ಕಂಪನಿಯ ಲಾಬಿಗೆ ಮಣಿದಿದೆ ಎಂದು ಅನುಮಾನ ಕಾಡುತ್ತಿದೆ. ಈ ತೀರ್ಮಾನದಿಂದ ಕಾಂಗ್ರೆಸ್ ಪಕ್ಷವು ಅಡಕೆ ಬೆಳೆಗಾರರ ವಿರೋಧಿ ಎಂದು ಗೊತ್ತಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು.
ಗುಟ್ಕಾದಿಂದ ಅಡಕೆಗೆ ಬೆಲೆ ಬಂದಿತ್ತು: ಹಿಂದೆ ಅಡಕೆಯನ್ನು ಸಾಂಪ್ರದಾಯಿಕವಾಗಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಾತ್ರ ಬೆಳೆಯಲಾಗುತ್ತಿತ್ತು. ಗುಟ್ಕಾ ಪ್ರವೇಶವಾದ ನಂತರ ಅಡಕೆ ಬೆಲೆಯಲ್ಲಿ ಹೆಚ್ಚಳ ಕಂಡಿತು. ಈಗ ಅಡಕೆಯನ್ನು ಬಯಲು ಸೀಮೆ ಸೇರಿದಂತೆ ಚಾನಲ್ ನೀರು ಬಳಸಿ ಅಡಕೆ ಬೆಳೆಯಲಾಗುತ್ತಿದೆ. ಅಡಕೆ ಉತ್ಪಾದನೆಯಲ್ಲಿ ಹೆಚ್ಚಳ ಕಂಡಿದ್ದು, ಗುಟ್ಕಾ ಬ್ಯಾನ್ ಆದರೆ ಅಡಕೆ ೆಲೆ ಸದ್ಯಕ್ಕೆ ಕುಸಿಯಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಹಿಂದೆ ವಿದೇಶಿ ಅಡಕೆ ಮಂಗಳೂರು ಬಂದರಿನ ಮೂಲಕ ಭಾರತಕ್ಕೆ ಬರುತ್ತಿತ್ತು. ಈಗ ರಾಜ್ಯದ ಎಲ್ಲಾ ಬಂದರಿನ ಮೂಲಕ ಪ್ರವೇಶ ಆಗುತ್ತಿದ್ದು, ಅಡಕೆ ಬೆಲೆ ಕುಸಿಯಲು ಇದೂ ಕಾರಣವಾಗುತ್ತದೆ. ಕ್ಯಾಂಪ್ಕೋ ಸಂಸ್ಥೆ ಅ್ಙಕೆ ಬೆಲೆ ನಿಯಂತ್ರಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದರು.
ಸಾರಾಯಿ ಟಾನಿಕ್ಕಾ: ಸಾರಾಯಿ ಎಂದರೆ ಟಾನಿಕ್ಕಾ ಎಂದು ಡಿ.ಎನ್. ಜೀವರಾಜ್ ಅವರು ಸರ್ಕಾರವನ್ನು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರ ಸರ್ಕಾರ ಒಂದೆಡೆ ಗುಟ್ಕಾ ಆರೋಗ್ಯಕ್ಕೆ ಹಾನಿಕಾರ ಎಂದ ಬ್ಯಾನ್ ಮಾಡುತ್ತಾರೆ. ಅಗ್ಗದ ಮದ್ಯ ತಯಾರಿಸುವ ಬಗ್ಗೆ ಚಿಂತನೆ ನಡೆಸುತ್ತಾರೆ. ಬಡವರು ಅಗ್ಗದ ಮದ್ಯ ಕುಡಿದರೆ ಆರೋಗ್ಯ ಕೆಡುವುದಿಲ್ಲವೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅನುಭವಿ ಹಾಗೂ ರೈತರ ಪರ ಚಿಂತನೆ ಮಾಡುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ಸಿದ್ದರಾಮಯ್ಯ ಅವರ ಸರ್ಕಾರ ಬಂದು 17 ದಿನಗಳಲ್ಲಿ ತೆಗೆದುಕೊಂಡ ಎಲ್ಲಾ ನಿರ್ಧಾರಗಳು ರೈತ ವಿರೋಧಿ ನಿರ್ಧಾರಗಳೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
2009 ರಲ್ಲಿ ಗುಟ್ಕಾ ಬ್ಯಾನ್ ಮಾಡಬಾರದು ಎಂದು ಸರ್ವಪಕ್ಷ ನಿಯೋಗ ದೆಹಲಿಗೆ ತೆರಳಿ ಪ್ರಧಾನಮಂತ್ರಿಯನ್ನು ಭೇಟಿ ಮಾಡಿದ್ದೆವು. ಆ ನಿಯೋಗದಲ್ಲಿ ಸಿದ್ದರಾಮಯ್ಯ ಸಹ ಇದ್ದರು. ಗುಟ್ಕಾ ಬ್ಯಾನ್ ಮಾಡಿದರೆ ಲಕ್ಷಾಂತರ ಅಡಕೆ ಬೆಳೆಗಾರರು ಬೀದಿಗೆ ಬರುತ್ತಾರೆ ಎಂದು ಇದೇ ಸಿದ್ದರಾಮಯ್ಯ ಪ್ರಧಾನಮಂತ್ರಿಗೆ ತಿಳಿಸಿದ್ದರು ಎಂದು ಡಿ.ಎನ್. ಜೀವರಾಜ್ ತಿಳಿಸಿದರು.
ಬೀದಿಗಿಳಿದು ಹೋರಾಟ: ಸರ್ಕಾರ ರೈತರು ಒತ್ತುವರಿ ಮಾಡಿದ ಭೂಮಿಯನ್ನು ತೆರವುಗೊಳಿಸಿದರೆ ಬೀದಿಗಿಳಿದು ಹೋರಾಟ ಮಾಡಬೇಕಾದೀತು ಎಂದು ಡಿ.ಎನ್. ಜೀವರಾಜ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರೈತರು ತಮ್ಮ ಬದುಕಿಗಾಗಿ ಒತ್ತುವರಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ರೈತರ ಪರವಾಗಿ ನಿಧಾರ ತೆಗೆದುಕೊಳ್ಳಬಹುದು ಎಂದು ಕಾಯುತ್ತಿದ್ದರೆ ರೈತ ವಿರೋಧಿ ನಿರ್ಧಾರ
ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ರೈತ ವಿರೋಧಿ ಎಂದು ಸಾಬೀತಾಗಿದೆ ಎಂದು ಅವರು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಶೃಂಗೇರಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ನೀಲೇಶ್, ಕಸಬಾ ಹೋಬಳಿ ಅಧ್ಯಕ್ಷ ಎಚ್.ಎಂ. ಮನು, ಬಿಜೆಪಿ ಮುಖಂಡ ಗೋಪಿ ಉಪಸ್ಥಿತರಿದ್ದರು.