ಮುಂಗಾರು ಉತ್ತಮ:ರೈತರಲ್ಲಿ ಉತ್ಸಾಹ
-ಅನಂತ ನಾಡಿಗ್
ತರೀಕೆರೆ: ಕಳೆದ ಎರಡು-ಮೂರು ವರ್ಷಗಳಿಂದ ಮಳೆಯ ಕೊರತೆ ಅನುಭವಿಸಿ ನಲುಗಿದ್ದ ತಾಲೂಕಿನಲ್ಲಿ ಈ ಬಾರಿ ಮುಂಗಾರು ಆಶಾದಾಯಕವಾಗಿರುವುದರಿಂದ ರೈತರಲ್ಲಿ ಹೊಸ ನಿರೀಕ್ಷೆ ಹುಟ್ಟುಹಾಕಿದೆ.
ತಾಲೂಕಿನ 70ಕ್ಕೂ ಹೆಚ್ಚು ವಿವಿಧ ಭಾಗಗಳ ಕೆರೆ ಕಟ್ಟೆಗಳಿಗೆ ಹಳ್ಳ ಕೊಳ್ಳಗಳಿಗೆ ಮಳೆ ನೀರೇ ನೇರ ಆಶ್ರಯವಾಗಿದೆ. ತಾಲೂಕಿನ ಕೆಮ್ಮಣಗುಂಡಿ, ಕಲ್ಲತ್ತಿಗಿರಿ, ತಣಿಗೇಬೈಲು, ತಿಮ್ಮನಬೈಲು ಭದ್ರಾ ಅಭಯಾರಣ್ಯ, ಹೆಬ್ಬೆ ಅರಣ್ಯ ಪ್ರದೇಶ, ಲಿಂಗದಹಳ್ಳಿ ಏರುಗುಡ್ಡ, ಗುಡ್ಡದಬೀರನಹಳ್ಳಿ ಮುಂತಾದ ಪ್ರದೇಶಗಳು ತಾಲೂಕಿನ ಹೇರಳ ಮಳೆ ಬೀಳುವ ಪ್ರದೇಶಗಳಾಗಿದ್ದು, ಸಂಪರ್ಕ ಕೆರೆಗಳಿಗೆ ನೀರಿನ ಸೆಲೆ ತುಂಬುವ ಜೀವಜಲ ಮೂಲಗಳೆನಿಸಿವೆ. ಈ ಜಲಾನಯನ ಪ್ರದೇಶಗಳಲ್ಲಿ ಮುಂಗಾರು ಮಳೆ ಒಳ್ಳೆಯ ನಿರೀಕ್ಷೆ ಹುಟ್ಟಿಸಿದೆ.
ಬೀಜ, ಗೊಬ್ಬರ ಖರೀದಿ: ಕಳೆದ ಒಂದೆರಡು ವಾರಗಳಿಂದ ತಾಲೂಕಿನಾದ್ಯಂತ ದಿನ ಬಿಟ್ಟು ದಿನ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಸಂತೋಷದಿಂದ ಕೃಷಿ ಉಪಕರಣಗಳು, ರೈತ ಕೇಂದ್ರಗಳಿಂದ ಬಿತ್ತನೆ ಬೀಜ, ರಸ ಗೊಬ್ಬರವನ್ನು ಖರೀದಿ ಮಾಡುತ್ತಿದ್ದಾರೆ. ಜಮೀನು, ಹೊಲ ಗದ್ದೆಗಳು ತನುವಾಗಿರುವುದರಿಂದ ಉಳುಮೆ ಮಾಡಿ ಭೂಮಿ ಹದ ಮಾಡಿಕೊಳ್ಳುವ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತ್ತೆ ಕೆಲವು ಪ್ರದೇಶಗಳಲ್ಲಿ ಈಗಾಗಲೇ ಭೂಮಿ ಉಳಿಮೆ ಮುಗಿಸಿ ಬಿತ್ತನೆ ಕಾರ್ಯವನ್ನೂ ಪ್ರಾರಂಭಿಸಲಾಗಿದೆ.
42 ಸಾವಿರ ಹೆ.ಪ್ರದೇಶ: ತಾಲೂಕಿನಲ್ಲಿ ಬತ್ತ, ಹತ್ತಿ, ನೆಲಗಡಲೆ, ಮುಸುಕಿನ ಜೋಳ, ಸೂರ್ಯಕಾಂತಿ, ಎಳ್ಳು, ಹೆಸರು, ಉದ್ದು, ತೊಗರಿ ತಾಲೂಕಿನ ಪ್ರಮುಖ ಬೆಳೆಗಳಾಗಿದ್ದು, ಒಟ್ಟು 42,500 ಹೆ.ಪ್ರದೇಶ ಕೃಷಿ ಯೋಗ್ಯ ಭೂಮಿ ಇದೆ. ಬಹುತೇಕ ಎಲ್ಲ ಕಡೆ ವಿವಿಧ ಬೆಳೆಗಳ ಬಿತ್ತನೆ ಕಾರ್ಯ ಶುರುವಾಗಿದೆ.
ಈರುಳ್ಳಿ, ಆಲೂ ಬಿತ್ತನೆ: ತಾಲೂಕಿನ ಅಜ್ಜಂಪುರ-ಶಿವನಿ ಹೋಬಳಿಯ, ಅಜ್ಜಂಪುರ, ಹೆಬ್ಬೂರು, ಶಿವನಿ, ಶಿವನಿ ಆರ್.ಎಸ್. ಗಡೀಹಳ್ಳಿ, ಬುಕ್ಕಾಂಬುದಿ ಮತ್ತಿತರ ಗ್ರಾಮಗಳಲ್ಲಿ ಮತ್ತು ಲಿಂಗದಹಳ್ಳಿ ಹೋಬಳಿಯ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಭೂಮಿಯನ್ನು ಸಿದ್ಧಗೊಳಿಸಿ ಈರುಳ್ಳಿ ಹಾಗೂ ಆಲೂಗೆಡ್ಡೆ ಬಿತ್ತನೆಯಲ್ಲಿ ತೊಡಗಿದ್ದಾರೆ.
ತಾಲೂಕಿನಲ್ಲಿ 10 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಈರುಳ್ಳಿ-ಆಲೂಗೆಡ್ಡೆ ಬೆಳೆಯಬಹುದಾಗಿದ್ದು ಇವು ಪ್ರಮುಖ ವಾಣಿಜ್ಯ ಬೆಳೆಗಳಾಗಿವೆ.
ಮಳೆಯ ನೀರನ್ನೇ ಹೆಚ್ಚು ಅವಲಂಬಿತವಾದ ತೋಟಗಾರಿಕೆ ಬೆಳೆಗಳಾದ ಅಡಕೆ, ತೆಂಗು, ಬಾಳೆ, ಮಾವು, ಸಪೋಟ ಮತ್ತಿತರೆ ಬೆಳೆಗಳೂ ಮಳೆಯನ್ನೇ ಆಶ್ರಯಿಸಿವೆ.
---