ಸಾವಿರಾರು ಬೆಳೆಗಾರರು ಬೀದಿಗೆ
ಬಾಳೆಹೊನ್ನೂರು: ಗುಟ್ಕಾ ನಿಷೇಧ ರಾಜ್ಯ ಸರ್ಕಾರದ ಆತುರದ ನಿರ್ಧಾರ. ಅಡಿಕೆ ಬೆಳೆಗಾರರ ಪಾಲಿಗೆ ಇದೊಂದು ಮರಣ ಶಾಸನ ಎಂದು ಶಾಸಕ ಡಿ.ಎನ್. ಜೀವರಾಜ್ ಹೇಳಿದ್ದಾರೆ.
ಇಲ್ಲಿನ ವಿದ್ಯಾಗಣಪತಿ ಸಮುದಾಯಭವನದಲ್ಲಿ ಬಾಳೆಹೊನ್ನೂರು ಹೋಬಳಿ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ನೂತನ ಶಾಸಕರಿಗೆ ಅಭಿನಂದನೆ ಹಾಗೂ ಕಾರ್ಯಕರ್ತರಿಗೆ, ಮತದಾರರಿಗೆ ಧನ್ಯವಾದ ಸಮರ್ಪಣಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ರೈತರಿಗೆ ನಷ್ಟ: ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಗುಟ್ಕಾ ನಿಷೇಧಕ್ಕೆ ಮುಂದಾಗಿರುವುದು ಸಾವಿರಾರು ಬೆಳೆಗಾರರ ಹಾಗೂ ಕಾರ್ಮಿಕರ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಈಗಾಗಲೇ ಅಡಿಕೆ ಬೆಲೆಯಲ್ಲಿ ಏರಿಳಿತದಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಈಗ ಗುಟ್ಕಾ ನಿಷೇಧದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯ ಸರ್ಕಾರವು ಸೀಗರೆಟ್ ತಯಾರಿಕಾ ಕಂಪನಿಗಳೊಂದಿಗೆ ಶಾಮೀಲಾಗಿ ಗುಟ್ಕಾ ನಿಷೇಧಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗರ ಅಪಪ್ರಚಾರದ ನಡುವೆಯೂ ಬಿಜೆಪಿ ಹ್ಯಾಟ್ರಿಕ್ ಜಯ ಸಾಧಿಸಿ ಇತಿಹಾಸ ನಿರ್ಮಿಸಿದೆ. ಕ್ಷೇತ್ರದಲ್ಲಿ ಆರು ದಶಕಗಳ ಕಾಲ ಇತರೆ ಸರ್ಕಾರಗಳು ಮಾಡಲಾಗದ ಅಭಿವೃದ್ಧಿ ಕಾಮಗಾರಿ ಗಳನ್ನು ಬಿಜೆಪಿ ಅವಧಿಯಲ್ಲಿ ಮಾಡಲಾಗಿದ್ದು, ಅಭಿವೃದ್ಧಿಗೆ ಪೂರಕವಾಗಿ ಮತದಾರರು ಮತ ನೀಡಿ ಆಶೀರ್ವದಿಸಿದ್ದಾರೆ ಎಂದು ಹೇಳಿದರು.
ಬಿಜೆಪಿ ಪಕ್ಷದ ಒಳಜಗಳವೇ ರಾಜ್ಯದಲ್ಲಿ ಪಕ್ಷ ಹಿನ್ನಡೆ ಸಾಧಿಸಲು ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಂಡು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಾಳೆಹೊನ್ನೂರು ಹೋಬಳಿ ಬಿಜೆಪಿ ಅಧ್ಯಕ್ಷ ಕೆ.ಕೆ. ವೆಂಕಟೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕೆ.ಟಿ. ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್. ರವೀಂದ್ರ ಕುಕ್ಕುಡಿಗೆ, ನರಸಿಂಹರಾಜಪುರ ತಾಲೂಕು ಬಿಜೆಪಿ ಉಪಾಧ್ಯಕ್ಷ ಬಿ.ಎನ್. ಭಾಸ್ಕರ್ ವೆನಿಲ್ಲಾ, ಮಾಗುಂಡಿ ಗ್ರಾ.ಪಂ. ಅಧ್ಯಕ್ಷ ಮೋಹನ್, ಕರ್ಕೇಶ್ವರ ಗ್ರಾ.ಪಂ. ಅಧ್ಯಕ್ಷ ರತ್ನಾಕರ್, ಬಿ.ಕಣಬೂರು ಗ್ರಾ.ಪಂ. ಸದಸ್ಯ ಅಹಮ್ಮದ್ ಜಮೀರ್, ಮೇಲ್ಪಾಲ್ ದಿನಕರ್, ಬನ್ನೂರು ರಾಜು, ಬಿ. ಜಗದೀಶ್ಚಂದ್ರ ಉಪಸ್ಥಿತರಿದ್ದರು.
--