ಪ್ರಕೃತಿ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ
ತರೀಕೆರೆ: ಪ್ರಕೃತಿಯನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ಕಾಪಾಡುತ್ತದೆ ಎಂದು ತರೀಕೆರೆ ಹಿರಿಯ ಸಿವಿಲ್ ನ್ಯಾಯಾಧೀಶ ಹಿದಾಯತ್ ಉಲ್ಲಾ ಷರೀಫ್ ಹೇಳಿದರು.
ಅವರು ಬುಧವಾರ ಕಾನೂನು ನೆರವು ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ ಸಾ.ಶಿ.ಇ.ವತಿಯಿಂದ ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಸಮಾರಂಭದಲ್ಲಿ
ಮಾತನಾಡಿದರು.
ಹೊಂದಿಕೊಂಡು ಜೀವನ: ಪರಿಸರದ ಜೊತೆ ಹೊಂದಿಕೊಂಡು ಮನುಷ್ಯ ಜೀವನ ನಡೆಸುತ್ತಿದ್ದ.ಆದರೆ ಇಂದು ಜಾಗತೀಕರಣ ಕೈಗಾರಿಕರಣದಿಂದಾಗಿ ಕಾಡು ನಾಶವಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಪರಿಸರದ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ತಿಳಿಸಿದ ಅವರು ಹೆಚ್ಚು ಗಿಡ ಮರಗಳನ್ನು ನೆಟ್ಟು ಪೋಷಿಸಿ ಪರಿಸರ ಉಳಿಸಬೇಕು ಎಂದರು.
ವಕೀಲ ಜಗದೀಶ್ ಮಾತನಾಡಿ, ಗಿಡ ನೆಡುವುದರಿಂದ ಮನಸ್ಸಿಗೆ ತೃಪ್ತಿ ಇರುತ್ತದೆ ಎಂದರು. ವಕೀಲ ತೇಜಮೂರ್ತಿ ಮಾತನಾಡಿ ಪರಿಸರ ನೈಸರ್ಗಿಕ ಕೊಡುಗೆ, ಗಿಡ, ಮರ, ಗಾಳಿ ನೀರು ಇತ್ಯಾದಿಗಳನ್ನು ಹಾಳು ಮಾಡಬಾರದು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಎಪಿಪಿ ಭಾಸ್ಕರ್, ವಕೀಲ ಟಿ.ಕೆ.ನಂದೀಶ್ವರಯ್ಯ, ಎಸ್. ಸುರೇಶ್ಚಂದ್ರ ಮೊದಲಾದವರು ಮಾತನಾಡಿದರು. ಕಿರಿಯ ಸಿವಿಲ್ ನ್ಯಾಯಾಧೀಶರಾದ ಜಯಲಕ್ಷ್ಮಿ, ಹಿರಿಯ ವಕೀಲ ಎಚ್.ಎಂ. ಓಂಕಾರಸ್ವಾಮಿ , ಆರ್.ಎಫ್.ಒ. ರಂಗಸ್ವಾಮಿ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ನ್ಯಾಯಾಲಯದ ಆವರಣದಲ್ಲಿ ವಿವಿಧ ಗಿಡಗಳನ್ನು ನಡೆಯಲಾಯಿತು.