ವಾಹನಗಳ ವೇಗ ನಿಯಂತ್ರಣಕ್ಕೆ ಬ್ಯಾರಿಕೇಡ್ ಬಳಸಿ
ಕ.ಪ್ರ. ವಾರ್ತೆ, ತರೀಕೆರೆ, ಜೂ. 5
ಪಟ್ಟಣ ವ್ಯಾಪ್ತಿಯಲ್ಲಿ ವಾಹನಗಳ ವೇಗ ನಿಯಂತ್ರಿಸಲು ಅಪಘಾತ ವಲಯಗಳಲ್ಲಿ ಬ್ಯಾರಿಕೇಡ್‌ಗಳನ್ನು ಬಳಸಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್ ತಿಳಿಸಿದರು.
ಅವರು ಬುಧವಾರ ಪೊಲೀಸ್ ಠಾಣೆಯಲ್ಲಿ ತರೀಕೆರೆ, ಅಜ್ಜಂಪುರ ಪೋಲೀಸ್ ಠಾಣೆ ವಾರ್ಷಿಕ ಪರಿವೀಕ್ಷಣೆ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ನಾಗರಿಕ ಸಮಿತಿ ಸಭೆಯಲ್ಲಿ ಮಾತನಾಡಿದರು.
ಬ್ಯಾರಿಕೇಡ್ ಅಳವಡಿಕೆ: ಪಟ್ಟಣ ವ್ಯಾಪ್ತಿಯಲ್ಲಿ ಅಪಘಾತ ವಲಯದ ಆಯ್ದ ಸ್ಥಳಗಳಲ್ಲಿ ಶೀಘ್ರದಲ್ಲೇ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಹೊರವಲಯದಿಂದ ಪಟ್ಟಣ ಪ್ರವೇಶಿಸುವ ವಾಹನಗಳ ವೇಗ ನಿಯಂತ್ರಿಸಬೇಕು, ರಸ್ತೆಯ ಒಂದೇ ಮಗ್ಗುಲಿನಲ್ಲಿ ವಾಹನಗ ಪಾರ್ಕಿಂಗ್ ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದ ಅವರು ಸಂಚಾರ ನಿಯಮ ಪಾಲಿಸುವ ಬಗ್ಗೆ ವಾಹನ ಚಾಲಕರಲ್ಲಿ ಮತ್ತು ಜನರಲ್ಲಿ ಅರಿವು ಮೂಡಿಸಬೇಕು ಎಂದರು.
ಮಹೇಂದ್ರಕುಮಾರ್ ಮಾತನಾಡಿ, ತಾಲೂಕಿನ ಶಿವನಿಯಲ್ಲಿ ಪೊಲೀಸ್ ಠಾಣೆ ಅಗತ್ಯವಾಗಿದೆ. ಇದರಿಂದ ಶಿವನಿ ಮತ್ತು ಸುತ್ತಮುತ್ತ ಪ್ರದೇಶಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ವಸತಿ ಗೃಹ: ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ನಿಕಟಪೂರ್ವ ಅಧ್ಯಕ್ಷ ಎನ್. ಮಂಜುನಾಥ್ ಮಾತನಾಡಿ ಪಟ್ಟಣಕ್ಕೆ ಸುಸಜ್ಜಿತ ಪೊಲೀಸ್ ವಸತಿಗೃಹ ಅಗತ್ಯವಾಗಿದೆ. ಶಿವನಿ ಭಾಗದಲ್ಲಿ ಪೋಲಿಸ್ ಠಾಣೆ ಬೇಡಿಕೆ ಬಹಳ ದಿನಗಳಿಂದ ಇದ್ದು ಅದನ್ನು ಪೂರೈಸಬೇಕು ಎಂದು ತಿಳಿಸಿದರು.
ಖಾದಿ ಮಂಡಳಿಯ ಟಿ.ಎಸ್. ಚಂದ್ರಶೇಖರ್ ಮಾತನಾಡಿದರು. ಪಟ್ಟಣದ ಕಲ್ಯಾಣ ಮಂದಿರಗಳ ಮುಂಭಾಗದಲ್ಲಿ ವಾಹನ ಪಾರ್ಕಿಂಗ್ ಮಾಡುವುದರಿಂದ ಸಾರ್ವಜಿನಿಕರಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.
ಮಂಜುನಾಥ ಪ್ರಸಾದ್, ಎನ್. ವೆಂಕಟೇಶ್, ಮುರುಳೀಧರ್, ಬಾಲರಾಜ್, ಸಿ.ಆರ್. ಬಸವರಾಜ್, ಮೊದಲಾದವರು ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಆರ್. ದೇವಾನಂದ್, ದುಗ್ಲಾಪುರ ಮಂಜುನಾಥ್, ಅಕ್ಬರ್ ಪಾಷ, ಸುರೇಶ್, ನಾಗರಿಕರು, ಡಿವೈಎಸ್‌ಪಿ ಸದಾನಂದ ಬಿ. ನಾಯಕ್, ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಉಮಾಪತಿ, ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ್, ಸಿಬ್ಬಂದಿ ಇದ್ದರು.