ಡೆಂಘೀ ಜ್ವರ ತಪಾಸಣೆಗೆ ವಿಶೇಷ ಘಟಕ
ಕಪ್ರ ವಾರ್ತೆ, ತರೀಕೆರೆ, ಜೂ. 6
ಜನರನ್ನು ಪೀಡಿಸುತ್ತಿರುವ ಡೆಂಘೀ ವಿರುದ್ಧ ಆರೋಗ್ಯ ಇಲಾಖೆ ಸಮರ ಸಾರಿದ್ದು, ತಾಲೂಕಿನಾದ್ಯಂತ ಎಲ್ಲಾ ಹಳ್ಳಿ-ಹೋಬಳಿ-ಪಟ್ಟಣಗಳಲ್ಲಿ ಜನರ ಸಹಕಾರದಿಂದ ಎಲ್ಲೆಡೆ ಲಾರ್ವಾ ಸಮೀಕ್ಷೆ, ಫಾಗೀಂಗ್ ನೆಡೆಸಿ, ಸಾಧ್ಯವಾದಷ್ಟು ಆಮೂಲಾಗ್ರವಾಗಿ ಸೊಳ್ಳೆ ನಿರ್ಮೂಲನೆಯನ್ನು ಭರದಿಂದ ಕೈಗೊಳ್ಳಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರ್ ತಿಳಿಸಿದ್ದಾರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲರಿಗೂ ಅನುಕೂಲವಾಗುವಂತೆ ಡೆಂಘೀ ತಪಾಸಣೆಗಾಗಿಯೇ ವಿಶೇಷ ಘಟಕ ಪ್ರಾರಂಭಿಸಿದ್ದು, ಅಲ್ಲಿ ತಜ್ಞ ವೈದ್ಯ ಡಾ. ಮಲ್ಲಿಕಾರ್ಜುನಪ್ಪ, ಡಾ.ಟಿ. ಶಿವಮೂರ್ತಿ ಸೇರಿದಂತೆ ಹಲವು ವೈದ್ಯ ಸಿಬ್ಬಂದಿಯನ್ನು ನೇಮಿಸಲಾಗಿದೆ. ದಿನದ 24 ಗಂಟೆಯೂ ಜನರಿಗೆ ವೈದ್ಯ ಸೇವೆ ದೊರಕುತ್ತದೆ ಎಂದು ಅವರು ತಿಳಿಸಿದ್ದಾರೆ.
ಲಾರ್ವಾ ಸಮೀಕ್ಷೆ: ಡೆಂಘೀ ಪೀಡಿತ ಕುಡ್ಲೂರು ಗ್ರಾಮದಿಂದ ಮೊದಲ್ಗೊಂಡು ಬೆಟ್ಟದಹಳ್ಳಿ, ಬುಕ್ಕಾಂಬುದಿ, ಹುಣಸಘಟ್ಟ ಅಜ್ಜಂಪುರ ಪಟ್ಟಣ ಇತ್ಯಾದಿ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ
ವ್ಯಾಪ್ತಿಯಲ್ಲಿ ಎಲ್ಲಾ ಕಡೆ ಲಾರ್ವಾ ಸಮೀಕ್ಷೆ ಮಾಡಲಾಗುತ್ತಿದೆ.
ಶಾಲಾ ಮಕ್ಕಳು, ಪಂಚಾಯಿತಿ ಸದಸ್ಯರು, ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರೊಡಗೂಡಿ ಪ್ರತಿ ಮನೆ ಅಂಗಡಿ ಮುಂಗಟ್ಟು ಇತ್ಯಾದಿಗಳಿಗೆ ಭೇಟಿ ನೀಡಿ, ನೀರಿನ ತೊಟ್ಟಿಗಳನ್ನು ಶುಬ್ರವಾಗಿ ಉಜ್ಜಿ ತೊಳೆದು ನೀರು ಸಂಗ್ರಹಿಸಬೇಕೆಂದು, ಸದಾ ತೊಡ್ಡಿ ಹಂಡೆಗಳನ್ನು ಮುಚ್ಚಿರಬೇಕು ಎಂದು ಸಾರ್ವಜನಿಕರಿಗೆ ಅರಿವು ಹಾಗು ಜಾಗೃತಿ ಮೂಡಿಸುವ ಕಾರ್ಯವನ್ನು ತಪ್ಪದೇ ಪ್ರತಿ ನಿತ್ಯ ನಿರ್ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಟೈರು ಚಿಪ್ಪು ನಾಶ: ಮನೆಯ ಸುತ್ತಮುತ್ತ ಹಳೇ ಟೈರುಗಳಲ್ಲಿ, ಚಿಪ್ಪು ಮುಂತಾದ ವಸ್ತುಗಳಲ್ಲಿ ನೀರು ಶೇಖರಣೆಯಾಗಿದ್ದರೆ, ಅದನ್ನು ಕೂಡಲೇ ನಾಶ ಪಡಿಸಿ, ಹಗಲು ನಿದ್ದೆ ಮಾಡುವಾಗ ಕೈಗಳಿಗೆ
ಸೊಳ್ಳೆ ನಿರೋಧಕ ಲೇಪನ ಬಳಸಬೇಕು ಎಂದು ತಿಳಿಸಿದ್ದಾರೆ.
ವೈದ್ಯರಾದ ಡಾ. ಪುರುಷೋತ್ತಮ, ಡಾ. ಪ್ರಸನ್ನ ಕುಮಾರ ಸಣ್ಣಕ್ಕಿ, ಡಾ. ರವಿಶಂಕರ್, ಡಾ. ನಟರಾಜ್, ಡಾ.ಬಿರಾದಾರ್, ಡಾ. ಶಿವಪ್ರಕಾಶ್, ಡಾ. ಗೀತಾ, ಡಾ. ಉಮಾ, 200ಕ್ಕೂ ಹೆಚ್ಚು ಆಶಾ ಕಾರ್ಯಕರ್ತರು, 60ಕ್ಕೂ ಹೆಚ್ಚು ಹಿರಿಯ ಹಾಗೂ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, 18ಕ್ಕೂ ಹೆಚ್ಚು ಹಿರಿಯ ಹಾಗು ಕಿರಿಯ ಆರೋಗ್ಯ ಸಹಾಯಕರು ಸಾರ್ವಜನಿಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆದು ಡೆಂಘೀಯನ್ನು ಸಂಪೂರ್ಣ ನಿಯಂತ್ರಿಸಲು ಸರ್ವ ರೀತಿಯಲ್ಲಿ ಸಜ್ಜಾಗಿ ಕಾರ್ಯಪ್ರವೃತ್ತರಾಗಿದ್ದಾರೆ.
ಜ್ವರ, ಯಾವುದೇ ರೀತಿಯ ಪ್ರಕರಣ ಕಂಡುಬಂದಲ್ಲಿ ಕೂಡಲೇ ಹತ್ತಿರದ ಪ್ರಾಥಮಿಕ ಕೇಂದ್ರಗಳಿಗೆ ತರೆಳಿ ವೈದ್ಯರ ಸಲಹೆ ಪಡೆಯಬೇಕು ಎಂದು ಅವರು ಮನವಿ ಮಾಡಿದ್ದು, ಸಾರ್ವಜನಿಕರು ಆತಂಕ ಪಡಬಾರದೆಂದು ಮನವಿ ಮಾಡಿದ್ದಾರೆ.