'ರಕ್ತದಾನ ಮಾಡಿ ಜೀವ ಉಳಿಸಿ'
ಕ.ಪ್ರ.ವಾರ್ತೆ, ತರೀಕೆರೆ, ಜೂ.6
ರಕ್ತದಾನ ದೇಹದ ಚೈತನ್ಯ ಹೆಚ್ಚಿಸುತ್ತದೆ ಎಂದು ಶಿವಮೊಗ್ಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಡಾ. ಅಶೋಕ್ ಅವರು ಹೇಳಿದರು.
ಜಮಾ ಅತೆ ಇಸ್ಲಾಮಿ ಹಿಂದ್ ತರೀಕೆರೆ ಘಟಕ, ಹ್ಯುಮ್ಯಾನಿಯನ್ ರಿಲೀಫ್ ಸೊಸೈಟಿ, ಮೆಗಾನ್ ಆಸ್ಪತ್ರೆ ಶಿವಮೊಗ್ಗದಿಂದ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿ, ರಕ್ತದಾನ ಚೈತನ್ಯ ಹೆಚ್ಚಿಸಿ, ಚುರುಕುತನದ ಜೊತೆಗೆ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗಿಸಿ, ಆರೋಗ್ಯ ವೃದ್ಧಿಸಿ ಮನುಷ್ಯ ಉಲ್ಲಸಿತನಾಗಲು ಕಾರಣವಾಗುತ್ತದೆ ಎಂದರು.
ರಕ್ತದ ಅವಶ್ಯಕತೆ: ತರೀಕೆರೆ ಪೊಲೀಸ್ ಇನ್ಸ್‌ಪೆಕ್ಟರ್ ಎಸ್. ಸುರೇಶ್ ಮಾತನಾಡಿ, ಅಪಘಾತ, ಗಲಭೆ, ಅಸ್ವಸ್ಥತೆ ಉಂಟಾದ ಸಮಯದಲ್ಲಿ ತಕ್ಷಣದಲ್ಲೇ ರಕ್ತದ ಅವಶ್ಯಕತೆ ಉಂಟಾಗುತ್ತದೆ. ಯುವಕರು ರಕ್ತದಾನ ಮಾಡಲು ಸ್ವಯಂ ಪ್ರೇರಿತರಾಗಿ ಬರುವಂತೆ ಮತ್ತು ಜೀವ ಉಳಿಸಲು ಸಾಮಾಜಿಕ ಕಾಳಜಿ ಉಂಟಾಗುವಂತೆ ಮಾಡಲು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಇಂತಹ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ತಿಳಿಸಿದರು.
ಎಚ್.ಆರ್.ಎಸ್.ನ ರಾಜ್ಯ ಕಾರ್ಯದರ್ಶಿ ಫಾರೂಕ್ ನಾಸ್ಟರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಉದ್ದೇಶದಿಂದಲೇ ಇಂತಹ ಸೇವಾ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ತರೀಕೆರೆ ಪಟ್ಟಣದಲ್ಲಿ ಈ ರಕ್ತದಾನ ಶಿಬಿರ ಏರ್ಪಡಿಸಿದ್ದು, ಸಂತೋಷ ತಂದಿದೆ ಎಂದರು.
ಎಚ್.ಆರ್.ಎಸ್.ನ ಸ್ಥಳೀಯ ಸಂಚಾಲಕ ಯಾಹ್ಯಾ ಅಲಿ ಬೇಗ್, ಎಪಿಸಿಆರ್‌ನ ಜಿಲ್ಲ ಸಂಚಾಲಕ ಆದಿಲ್ ಪಾಷ, ಶೇಕ್ ಜಾವೀದ್, ಮಾಜಿ ಪುರಸಭಾ ಸದಸ್ಯ ಜಿ.ಜೆ. ಗೋಪಿಕುಮಾರ್,
ಡಾ. ಗಿರೀಶ್ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶಿಬಿರದಲ್ಲಿ 60 ಜನ ರಕ್ತದಾನ ಮಾಡಿದರು.