ಚುನಾವಣಾ ಆಯೋಗದ ಗೆರೆ ದಾಟದ ಅಭ್ಯರ್ಥಿಗಳು
ಕ.ಪ್ರ.ವಾರ್ತೆ ಚಿಕ್ಕಮಗಳೂರು ಜೂ.7
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕಾದರೆ ಎಷ್ಟು ಹಣ ಬೇಕಾಗಬಹುದು. ಇದಕ್ಕೆ ಒಂದೇ ಮಾತಿನಲ್ಲಿ ಹೇಳುವುದಾದರೆ ಕೋಟ್ಯಂತರ ರುಪಾಯಿ ಬೇಕು. ಇಷ್ಟು ಪ್ರಮಾಣದ ಹಣ ಇಲ್ಲದವರು ಕಳೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡದೆ ಹಿಂದೆ ಸರಿದಿದ್ದಾರೆ.
ಆದರೆ, ಕಳೆದ ಚುನಾವಣೆಯಲ್ಲಿ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ 56 ಮಂದಿಯಲ್ಲಿ ಯಾರೂ 10 ಲಕ್ಷ ದಾಟಿಲ್ಲ. ರಾಜ್ಯ ಚುನಾವಣಾ ಆಯೋಗಕ್ಕೆ ಅಭ್ಯರ್ಥಿಗಳು ಚುನಾವಣಾ ವೆಚ್ಚದ ಬಗ್ಗೆ ವರದಿ ನೀಡಲು ಜೂ. 7 ಸಂಜೆ 5.30ರವರೆಗೆ ಕಾಲಾವಕಾಶ ನೀಡಲಾಗಿತ್ತು. 56 ಮಂದಿಯಲ್ಲಿ 44 ಮಾತ್ರ ಲೆಕ್ಕ ನೀಡಿದ್ದಾರೆ.
ಲಕ್ಷ್ಮಣ ರೇಖೆ ದಾಟಿಲ್ಲ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಯೋಗ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು 16 ಲಕ್ಷಕ್ಕೆ ಸೀಮಿತಗೊಳಿಸಿತ್ತು. ಈ ಲಕ್ಷ್ಮಣ ರೇಖೆಯನ್ನು ಯಾರೂ ದಾಟಿಲ್ಲ ಎಂಬುದು ಅವರು ನೀಡಿರುವ ವೆಚ್ಚದ ಪಟ್ಟಿಯಲ್ಲಿ ಹೇಳಲಾಗಿದೆ. ಅದು, ಎಷ್ಟು ಸತ್ಯ ಎಂಬುದು ಚುನಾವಣೆಯಲ್ಲಿ ಹರಿದ ಹಣದ ಹೊಳೆಯನ್ನು ಕಣ್ಣಾರೆ ಕಂಡಿರುವ ಜನರು ಪ್ರಶ್ನೆ ಮಾಡುವಂತಿದೆ.
ಖರ್ಚಿನ ವಿವರ: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ 15 ಮಂದಿ ಸ್ಪರ್ಧೆ ಮಾಡಿದ್ದರು.
ಈ ಪೈಕಿ ಸಿ.ಟಿ. ರವಿ ಅವರು ಚುನಾವಣೆಯಲ್ಲಿ ಖರ್ಚು ಮಾಡಿದ್ದು 5,91,467 ರುಪಾಯಿ. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಕೆ.ಎಸ್. ಶಾಂತೇಗೌಡ ಖರ್ಚು ಮಾಡಿದ್ದು 3,72,264, ಜೆಡಿಎಸ್‌ನ ಎಸ್.ಎಲ್. ಧರ್ಮೇಗೌಡ ಖರ್ಚು ಮಾಡಿದ್ದು 3,71,106 ರುಪಾಯಿ ಮಾತ್ರ. ಪಕ್ಷೇತರ ಅಭ್ಯರ್ಥಿ ಸ್ನೇಕ್ ನರೇಶ್ ಖರ್ಚು ಮಾಡಿದ್ದು 7000, ಹಿಂದೂಸ್ಥಾನ್ ನಿರ್ಮಾಣ ದಳದಿಂದ ಸ್ಪರ್ಧೆ ಮಾಡಿದ್ದ ದ್ವಾರಕೀಶ್ ಅವರು ಎಲ್ಲಾ ಅಭ್ಯರ್ಥಿಗಳಿಂದ ಅತ್ಯಂತ ಕಡಿಮೆ ಅಂದರೆ ಅವರು ಚುನಾವಣೆಯಲ್ಲಿ ಖರ್ಚು ಮಾಡಿದ್ದು ಕೇವಲ 5000 ರುಪಾಯಿ ಮಾತ್ರ.
ಶೃಂಗೇರಿ ಕ್ಷೇತ್ರದಲ್ಲಿ: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ 8 ಮಂದಿ ಸ್ಪರ್ಧೆ ಮಾಡಿದ್ದು, ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಡಿ.ಎನ್. ಜೀವರಾಜ್ ಚುನಾವಣೆಯಲ್ಲಿ ಖರ್ಚು ಮಾಡಿದ್ದು ಕೇವಲ 4,29,823 ರು., ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಖರ್ಚು ಮಾಡಿದ್ದು 8,92,610 ರುಪಾಯಿಗಳು.
ಮೂಡಿಗೆರೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಜೆಡಿಎಸ್‌ನ ಬಿ.ಬಿ. ನಿಂಗಯ್ಯ ಖರ್ಚು ಮಾಡಿದ್ದು 8,63,500 ರು., ಕಾಂಗ್ರೆಸ್‌ನ ಬಿ.ಎನ್. ಚಂದ್ರಪ್ಪ ಖರ್ಚು ಮಾಡಿದ್ದು 7,37,640 ರು., ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಎಂ.ಪಿ. ಕುಮಾರಸ್ವಾಮಿ ಖರ್ಚು ಮಾಡಿದ್ದು 9,11,430 ಜಿಲ್ಲೆಯ ಇತರೆ ಅಭ್ಯರ್ಥಿಗಳ ವೆಚ್ಚದ ಪಟ್ಟಿ ನೋಡಿದರೆ ಕುಮಾರಸ್ವಾಮಿ ಅವರೇ ಅತಿಹೆಚ್ಚು ಖರ್ಚು ಮಾಡಿದ್ದಾರೆ.
ಕಡೂರು ಕ್ಷೇತ್ರದಲ್ಲಿ: ಕಡೂರು ಕ್ಷೇತ್ರದಲ್ಲಿ ಜೆಡಿಎಸ್‌ನ ವೈಎಸ್‌ವಿ ದತ್ತ ಅವರು 6,09,700 ರುಪಾಯಿ ಖರ್ಚು ಮಾಡಿದ್ದರೆ, ಕಾಂಗ್ರೆಸ್‌ನ ಕೆ.ಬಿ. ಮಲ್ಲಿಕಾರ್ಜುನ ಅವರು 3,16,800 ರುಪಾಯಿ ವೆಚ್ಚ ಮಾಡಿದ್ದಾರೆ. ತರೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜಿ.ಎಚ್. ಶ್ರೀನಿವಾಸ್ ಅವರು ಚುನಾವಣೆಯಲ್ಲಿ 7,22,511 ರುಪಾಯಿ ಖರ್ಚು ಮಾಡಿದ್ದರೆ, ಸಮೀಪದ ಪ್ರತಿಸ್ಪರ್ಧಿ ಕೆಜೆಪಿಯ ಡಿ.ಎಸ್. ಸುರೇಶ್ ಖರ್ಚು ಮಾಡಿದ್ದು 4,55,302 ರುಪಾಯಿ ಮಾತ್ರ.
ಹದ್ದಿನ ಕಣ್ಣು: 2008ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಚುನಾವಣಾ ಆಯೋಗ ಅಭ್ಯರ್ಥಿಗಳ ಮೇಲೆ ಹದ್ದಿನ ಕಣ್ಣಿಟ್ಟಿತ್ತು.
ಚುನಾವಣೆಗೆ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು ಚುನಾವಣಾ ವೆಚ್ಚಕ್ಕಾಗಿ ಬ್ಯಾಂಕ್‌ನಲ್ಲಿ ಪ್ರತ್ಯೇಕವಾಗಿ ಅಕೌಂಟ್ ತೆರೆದು ಅದರ ಮೂಲಕವೇ ಹಣವನ್ನು ಬಳಸಿಕೊಳ್ಳಬೇಕು ಎಂದು ಕಟ್ಟಿ ನಿಟ್ಟಿನ ಆದೇಶ ಹೊರಡಿಸಿತ್ತು. ಅದರಂತೆ ಎಲ್ಲಾ ಅಭ್ಯರ್ಥಿಗಳು ಬ್ಯಾಂಕ್ ಖಾತೆ ತೆರೆದು ಅದರ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಪ್ರತಿದಿನ ಲೆಕ್ಕವನ್ನು ನೀಡುತ್ತಾ ಬಂದಿದ್ದರು. ಈ ವೆಚ್ಚವನ್ನು ದಾಖಲು ಮಾಡಿಕೊಳ್ಳಲು ಜಿಲ್ಲಾಡಳಿತ ಲೆಕ್ಕಪತ್ರ ಅಧಿಕಾರಿಗಳನ್ನು ನಿಯೋಜನೆ ಮಾಡಿತ್ತು.
ಚುನಾವಣಾ ಸಂದರ್ಭದಲ್ಲಿ ಖರ್ಚು ಮಾಡಿದ ಲೆಕ್ಕವನ್ನು ಆಯೋಗಕ್ಕೆ ನೀಡಲಾಗಿದೆ. ಅಭ್ಯರ್ಥಿಗಳು ನೀಡಿರುವ ಲೆಕ್ಕ ಎಷ್ಟರ ಮಟ್ಟಿಗೆ ಸತ್ಯದಿಂದ ಕೂಡಿದೆ ಎಂಬುದು ಜನರ ಪ್ರಶ್ನೆಯಾಗಿದೆ.
ಕಳೆದ ಐದು ವರ್ಷದ ಹಿಂದೆ ನಡೆದ ಚುನಾವಣೆಗೂ ಈಗ ನಡೆದಿರುವ ಚುನಾವಣೆಗೆ ಹೋಲಿಕೆ ಮಾಡಿದರೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಕೋಟ್ಯಂತರ ರುಪಾಯಿ ಖರ್ಚು ಮಾಡಿದ್ದಾರೆ. ಆದರೆ, ಲೆಕ್ಕ ಕೊಟ್ಟಿದ್ದು ಮಾತ್ರ ಲಕ್ಷಗಳಲ್ಲಿ. ಆದರೂ ಆಯೋಗ ಒಪ್ಪಲೇಬೇಕಾಗಿದೆ.
ಟಿ ಆರ್. ತಾರಾನಾಥ್