ಮೀನು, ಮಾಂಸದಂಗಡಿ ಸ್ಥಳಾಂತರಿಸಿ
ಕ.ಪ್ರ. ವಾರ್ತೆ ಚಿಕ್ಕಮಗಳೂರು ಜೂ.7
ನಗರದ ವಿವಿಧ ರಸ್ತೆಗಳಲ್ಲಿರುವ ಮೀನು ಹಾಗೂ ಮಾಂಸದ ಅಂಗಡಿಗಳನ್ನು ನಗರದ ಸಂತೆ ಮಾರ್ಕೆಟ್ನಲ್ಲಿರುವ ನಗರಸಭೆ ಮಳಿಗೆಗಳಿಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ಮಾಂಸ ಮತ್ತು ಮೀನು ಮಾರಾಟಗಾರರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಧರಣಿ ನಡೆಸಿದರು.
ಇಲ್ಲಿನ ಹಳೇ ತಾಲೂಕು ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ನಗರಸಭೆ ವಿರುದ್ಧ ಘೋಷಣೆ ಹಾಕಿದರು. ನಗರದಲ್ಲಿರುವ ಎಲ್ಲಾ ಮೀನು ಮತ್ತು ಮಾಂಸ ಮಾರಾಟ ಅಂಗಡಿಗಳನ್ನು ಕೂಡಲೇ ಸಂತೆ ಮಾರ್ಕೆಟ್ಗೆ ಸ್ಥಳಾಂತರಿಸಬೇಕೆಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಜಿಲ್ಲಾಧಿಕಾರಿಗಳಿಗೆ ಮತ್ತು ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಮಾರ್ಕೆಟ್ನವರಿಗೆ ನಷ್ಟ: ನಗರದಲ್ಲಿರುವ ಎಲ್ಲಾ ಮಾಂಸ ಮತ್ತು ಮೀನು ಮಾರಾಟ ಅಂಗಡಿಗಳನ್ನು ಸಂತೆ ಮಾರ್ಕೆಟ್ನಲ್ಲಿ ನಿರ್ಮಿಸಿರುವ ಹೊಸ ಮಳಿಗೆಗೆ ಸ್ಥಳಾಂತರಿಸಲಾಗುವುದೆಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದರಿಂದ ಕೆಲವರು ಸುಮಾರು 1.75 ಲಕ್ಷ ಮುಂಗಡ ಹಣ ನೀಡಿ ಮಳಿಗೆಯನ್ನು ಪಡೆದು ಅಂಗಡಿಯನ್ನು ಸ್ಥಳಾಂತರಿಸಿದ್ದಾರೆ.
ಆದರೆ, ನಗರದ ವಿವಿಧ ಭಾಗಗಳಲ್ಲಿರುವ ಬಹುತೇಕ ಅಂಗಡಿಗಳನ್ನು ಸ್ಥಳಾಂತರಿಸಲು ನಗರಸಭೆ ಮುಂದಾಗದಿರುವುದರಿಂದ ಮೀನು ಮತ್ತು ಮಾಂಸ ಖರೀದಿಸುವವರು ಸಂತೆ ಮಾರ್ಕೆಟ್ನಲ್ಲಿರುವ ಮಳಿಗೆಗೆ ಬಾರದೆ ನಗರದ ವಿವಿಧ ಅಂಗಡಿಗಳಲ್ಲಿ ಖರೀದಿಸುತ್ತಿರುವುದರಿಂದ ತಮಗೆ ಅಪಾರ ನಷ್ಟವುಂಟಾಗುತ್ತಿದೆ ಎಂದು ತಿಳಿಸಿದ್ದಾರೆ.
ಸ್ಥಳಾಂತರಕ್ಕೆ ಒತ್ತಾಯ: ಸಂತೆ ಮಾರ್ಕೆಟ್ ಪ್ರವೇಶ ದ್ವಾರದಲ್ಲೇ ಕೋಳಿ ಮಾಂಸದ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸುತ್ತಿರುವುದರಿಂದ ಈ ಹೊಸ ಮಳಿಗೆಗೆ ಅಂಗಡಿಗಳನ್ನು ಸ್ಥಳಾಂತರಿಸುವ ತಮಗೆ ವ್ಯಾಪಾರವಾಗದೆ ವಿಪರೀತ ನಷ್ಟವಾಗುತ್ತಿದೆ. ಕೂಡಲೇ ಅಧಿಕಾರಿಗಳು ಕ್ರಮ ಕೈಗೊಂಡು ನಗರದ ವಿವಿಧ ಪ್ರದೇಶಗಳಲ್ಲಿರುವ ಮೀನು ಮತ್ತು ಮಾಂಸ ಅಂಗಡಿಗಳನ್ನು ಹೊಸ ಸಂಕೀರ್ಣಕ್ಕೆ ಸ್ಥಳಾಂತರಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದೊರೆ, ಮುಜಿಬ್, ಫಜರ್, ಅಸ್ಲಾಂ ಭಾಗವಹಿಸಿದ್ದರು.
ಹಂತ ಹಂತವಾಗಿ ಕ್ರಮ: ನಗರದ ಸ್ವಚ್ಛತಾ ದೃಷ್ಟಿಯಿಂದ ನಗರಸಭೆಯಲ್ಲಿ ಈ ಹಿಂದೆಯೇ ಆಗಿರುವ ನಿರ್ಣಯದ ಪ್ರಕಾರ ಸಂತೆ ಮಾರುಕಟ್ಟೆಯಲ್ಲಿ ಮೀನು ಮತ್ತು ಮಾಂಸ ಮಾರಾಟದ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಇಲ್ಲಿಗೆ ಹಲವು ಮಂದಿ ತಮ್ಮ ವ್ಯಾಪಾರವನ್ನು ಸ್ಥಳಾಂತರಿಸಿದ್ದಾರೆ ಎಂದು ಪೌರಾಯುಕ್ತ ಪ್ರಭಾಕರ್ ತಿಳಿಸಿದ್ದಾರೆ.
ಶುಕ್ರವಾರ ಮಾರ್ಕೆಟ್ ರಸ್ತೆಯಲ್ಲಿದ್ದ ನಾಲ್ಕು ಮಾಂಸದ ಅಂಗಡಿಗಳನ್ನು ತೆರವುಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನಗರದ ವಿವಿಧೆಡೆಗಳಲ್ಲಿರುವ ಮೀನು ಮತ್ತು ಮಾಂಸದ ಅಂಗಡಿಗಳನ್ನು ತೆರವುಗೊಳಿಸಲಾಗುವುದು ಎಂದು ಹೇಳಿದ್ದಾರೆ.