ಮುಗಿಯದ ಪಡಿತರ ಚೀಟಿ ಗೊಂದಲ
ಕ.ಪ್ರ.ವಾರ್ತೆ ನ.ರಾ.ಪುರ ಜೂ.7
ಪಡಿತರ ಚೀಟಿ ಗೊಂದಲ ಇನ್ನೂ ಮುಂದುವರಿದಿದ್ದು, ಎಪಿಎಲ್ ಕಾರ್ಡ್ದಾರರಿಗೆ ಬಿಪಿಎಲ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ದಾರರಿಗೆ ಎಪಿಎಲ್ ಕಾರ್ಡ್ ನೀಡಲಾಗಿದೆ ಎಂದು ತಾಪಂ ಸಾಮಾನ್ಯ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.
ಶುಕ್ರವಾರ ತಾಪಂ ಸಾಮಾರ್ಥ್ಯ ಸೌಧದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ತಾಪಂ ಅಧ್ಯಕ್ಷ ಜೆ.ಜಿ.ನಾಗರಾಜ್ ವಿಷಯ ಪ್ರಸ್ತಾಪ ಮಾಡಿ, ಪಡಿತರ ಚೀಟಿ ಗೊಂದಲ ಸರಿಪಡಿಸುವಂತೆ ಹಿಂದೆಯೇ ಸೂಚನೆ ನೀಡಿದ್ದರೂ ಸರಿಪಡಿಸಿಲ್ಲ ಎಂದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್ ಮಾತನಾಡಿ, ಕೆಲವು ಗ್ರಾಮಗಳಲ್ಲಿ ಅಡಕೆ ತೋಟ ಇದ್ದವರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ. ಕೂಲಿ ಮಾಡುವುವರಿಗೆ ಬಿಪಿಎಲ್ ಕಾರ್ಡು ನೀಡಲಾಗಿದೆ ಇದಕ್ಕೆ ಯಾವ ಮಾನದಂಡ ಬಳಸಲಾಗುತ್ತದೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಇನ್ನೂ ಹಲವು ಸದಸ್ಯರು ಬಿಬಿಸಿ ಚರ್ಚೆ ನಡೆಸಿದರು.
ಡೆಂಘೀ; ಮುಂಜಾಗ್ರತೆಗೆ ಸೂಚನೆ: ಡೆಂಘೀ ಬಗ್ಗೆ ಪ್ರಸ್ತಾಪ ಮಾಡಿದ ಅಧ್ಯಕ್ಷ ಜೆ.ಜಿ. ನಾಗರಾಜ್ ಆಸ್ಪತ್ರೆ ಸುತ್ತಮುತ್ತ ಸ್ವಚ್ಛವಾಗಿಡಿ. ಪಪಂ ಡೆಂಘೀ ಬರದಂತೆ ಏನು ಮುಂಜಾಗ್ರತಾ ಕ್ರಮ ಕೈ ಗೊಂಡಿದೆ ಎಂದು ಪ್ರಶ್ನಿಸಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪ್ರಭಾಕರ್ ಸಭೆಗೆ ಮಾಹಿತಿ ನೀಡಿ, ಈಗಾಗಲೇ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗಿದೆ. ಶೀಘ್ರದಲ್ಲೇ ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆ ಕರೆಯಲಾಗುತ್ತದೆ. ಲಾರ್ವಾ ಸಮೀಕ್ಷಾ ತಂಡ ರಚಿಸಲಾಗಿದೆ. ಗ್ರಾಪಂಗಳಲ್ಲಿ ಸಭೆ ಏರ್ಪಡಿಸಿ ಜನ ಜಾಗೃತಿ ಮೂಡಿಸಬೇಕು. ಕರ ಪತ್ರ ಮುದ್ರಿಸಿ ಹಂಚಬೇಕು ಎಂದರು.
ವಿದ್ಯುತ್ ಸಂಪರ್ಕ ವಿಳಂಬ: ಗಂಗಾ ಕಲ್ಯಾಣ ಯೋಜನೆಯಡಿ ತಾಲೂಕಿನಾದ್ಯಂತ ವಿದ್ಯುತ್ ಸಂಪರ್ಕ ವಿಳಂಬವಾಗಿದ್ದರಿಂದ ಕುಡಿಯುವ ನೀರು ಕೊಡಲು ಸಾಧ್ಯವಾಗಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಸ್ಪಷ್ಟನೆ ನೀಡಿದ ಬಾಳೆಹೊನ್ನೂರು ಸಹಾಯಕ ಕಾರ್ಯಾಪಾಲಕ ಎಂಜಿನಿಯರ್ ವಿಜಯಕುಮಾರ್, ತಾಲೂಕಿನಲ್ಲಿ 40 ಕುಡಿಯುವ ನೀರಿನ ಯೋಜನೆಗೆ ಟಿ.ಸಿ. ಕೂರಿಸುವ ಆರ್.ಸಿ.ಸಿ. ಕಂಬಗಳು ಬರದೆ ವಿಳಂಬವಾಗಿದೆ. ಈಗಾಗಲೇ ಈ ಬಗ್ಗೆ ಪ್ರಯತ್ನ ಮುಂದುವರಿಸಿದ್ದೇವೆ ಎಂದರು.
ಆಶ್ರಯ ಮನೆ: ಕಳೆದ 10 ವರ್ಷಗಳಿಂದಲೂ ಬಡವರಿಗೆ ಆಶ್ರಯ ಮನೆ ಕೊಡಲು ಸಾಧ್ಯವಾಗಿಲ್ಲ. ಗ್ರಾಪಂ ಸರ್ವೇ ಮಾಡಿಸಿ ಕಂದಾಯ ಭೂಮಿ ಇದ್ದಲ್ಲಿ ಅದಕ್ಕೆ ಬೇಲಿ ಹಾಕಿ ನಿವೇಶನವಾಗಿ ಪರಿವರ್ತಿಸಿ ಎಂದು ಸದಸ್ಯ ಎಸ್.ಎಸ್. ಶಾಂತಕುಮಾರ್ ಸಲಹೆ ನೀಡಿದರು.
ಕೃಷಿ ಇಲಾಖೆ ಜಾಗ: ಜಿಪಂ ಸದಸ್ಯ ಆದಿಲ್ ಮಾತನಾಡಿ, ಕೃಷಿ ಇಲಾಖೆ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದು, ಈ ವಿಷಯ ನ್ಯಾಯಾಲಯದಲ್ಲಿ ತೀರ್ಮಾನವಾಗಿದೆ. ಕೃಷಿ ಇಲಾಖೆ ಜಾಗವನ್ನು ಸರ್ಕಾರ ವಶಪಡಿಸಿಕೊಳ್ಳಬೇಕಾಗಿತ್ತು. ಇನ್ನೂ ಯಾಕೆ ವಶಪಡಿಸಿಕೊಂಡಿಲ್ಲ ಎಂದು ಪ್ರಶ್ನಿಸಿದರು.
ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಜೆ.ಜಿ.ನಾಗರಾಜ್ ವಹಿಸಿದ್ದರು. ಉಪಾಧ್ಯಕ್ಷೆ ಸುಮಿತ್ರ, ಜಿಪಂ ಸದಸ್ಯರಾದ ಆದಿಲ್, ಸುಜಾತ, ತಾಪಂ ಸಿಇಒ ವಿಜಯಕುಮಾರ್, ತಹಸೀಲ್ದಾರ್ ಕೃಷ್ಣಮೂರ್ತಿ, ಇಲಾಖೆ ಅಧಿಕಾರಿಗಳು ಇದ್ದರು.