ವ್ಯಂಗ್ಯಚಿತ್ರಗಳಿಲ್ಲದ ಪತ್ರಿಕೆ ಒಣಭೂಮಿಯಿದ್ದಂತೆ: ಹಂಪನಾ
ಕ.ಪ್ರ.ವಾರ್ತೆ ಶಿವಮೊಗ್ಗ ಜೂ.7
ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರ ಇಲ್ಲವಾದರೆ ಅದು ಒಣಭೂಮಿಯಂತೆ. ವ್ಯಂಗ್ಯಚಿತ್ರ ಜೊತೆಗೂಡಿದರೆ ಅಮೃತವೃಕ್ಷ ನೆಟ್ಟಂತೆ ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ನಾಡೋಜ, ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ ಹಾಗೂ ವಾರ್ತಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ವ್ಯಂಗ್ಯಚಿತ್ರಕಾರರ ಮೂರು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇದು ಐಟಿ, ಬಿಟಿ ಕಾಲವಾಗಿದ್ದು ಎಲ್ಲವೂ ವೇಗದಲ್ಲಿ ನಡೆಯುವುದರಿಂದ ವ್ಯಂಗ್ಯಚಿತ್ರಕಾರನು ವೇಗ ಮತ್ತು ಚುರುಕುತನವನ್ನು ಬೆಳೆಸಿಕೊಳ್ಳಬೇಕೆಂದರು
ವ್ಯಂಗ್ಯಚಿತ್ರಕಲೆ ಒಬ್ಬ ವ್ಯಕ್ತಿಯ ಮುಖ ನೋಡಿದಕ್ಷಣಾರ್ಧದಲ್ಲಿಯೇ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಗ್ರಹಿಸಿ ಗೆರೆಗಳ ಮೂಲಕ ವಿಡಂಬನೆ ಮಾಡುವ ಕಲೆ. ಆದ್ದರಿಂದ ವ್ಯಂಗ್ಯಚಿತ್ರಕಾರರಿಗೆ ಏಕಾಗ್ರತೆ ಬಹುಮುಖ್ಯ. ಇವರ ಹುದ್ದೆ ಸಾಮಾನ್ಯದ್ದಲ್ಲ. ಅನೇಕ ಗುಣಗಳ ಸಮಾವೇಶ ಹೊಂದಿದ ವ್ಯಕ್ತಿ ಮಾತ್ರ ವ್ಯಂಗ್ಯಚಿತ್ರಕಾರನಾಗಬಲ್ಲ. ನಿರಂತರ ಓದುವ, ವ್ಯಕ್ತಿತ್ವವನ್ನು ಕ್ಷಣದಲ್ಲಿ ಅಳೆಯುವ, ತಕ್ಕಡಿಯಲ್ಲಿ ತೂಗಿನೋಡುವ ವ್ಯಕ್ತಿತ್ವ ಹೊಂದಿದ ವ್ಯಕ್ತಿಗಳು ಉತ್ತಮ ವ್ಯಂಗ್ಯಚಿತ್ರಕಾರರಾಗಬಹುದು ಎಂದರು.
ಅಂಕು ಡೊಂಕು: ವ್ಯಂಗ್ಯಚಿತ್ರಕಾರರನ್ನು ವಕ್ರೋಕ್ತಿ ಜೀವಿಗಳೆಂದೂ ಕರೆಯಬಹುದು. ವಕ್ರಕ್ಕೆ ಸೌಂದರ್ಯ ಎಂಬ ಅರ್ಥವೂ ಇದೆ. ಈ ಅಂಕುಡೊಂಕುಗಳಲ್ಲಿ ಸೌಂದರ್ಯತೆ ಇದೆ. ಅದನ್ನು ಪ್ರಸ್ತುತಪಡಿಸಿ ಸಮಾಜಕ್ಕೆ ಸಂದೇಶ ನೀಡುತ್ತಿರುವ
ವ್ಯಂಗ್ಯಚಿತ್ರಕಾರರ ಕೊಡುಗೆ ಮಹತ್ವದ್ದು. ಯುವ ವ್ಯಂಗ್ಯಚಿತ್ರಕಾರರನ್ನು ಪ್ರೋತ್ಸಾಹಿಸುವ ಇಂಥ ಕಾರ್ಯಾಗಾರಗಳು ಇಂದಿನ ಪೀಳಿಗೆಗೆ ಅವಶ್ಯಕ ಎಂದ ಹಂಪನಾ, ವ್ಯಂಗ್ಯಚಿತ್ರಕಾರರು ಕಾಲಕ್ಕೆ ತಕ್ಕಹಾಗೆ ಸಜ್ಜುಗೊಳ್ಳಬೇಕಾಗಿದೆ ಎಂದರು.
ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷ ಎಸ್.ವಿ. ಪದ್ಮನಾಭ್, ಹಿರಿಯ ವ್ಯಂಗ್ಯಚಿತ್ರಕಾರ ಬಿ.ಜಿ. ಗುಜ್ಜಾರಪ್ಪ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಪ್ರತಿಷ್ಠಾನದ ಕೋಶಾಧಿಕಾರಿ ಮನುದೇವ್, ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಹಮೀದ್ ಇದ್ದರು.