ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಡೆಂಘೀ ಹರಡದಂತೆ ಮುಂಜಾಗ್ರತಾ ಕ್ರಮ: ಎಸಿ

Mainashree
Updated On : 9 Jun 2013, 11:02 am

ಕ.ಪ್ರ.ವಾರ್ತೆ  ನ.ರಾ.ಪುರ  ಜೂ.8
ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಡೆಂಘೀ ಜ್ವರ ಕಾಣಿಸಿಕೊಂಡಿರುವುದರಿಂದ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತರೀಕೆರೆ ಉಪ ವಿಭಾಗಾಧಿಕಾರಿ ಜಿ. ಅನುರಾಧಾ ತಿಳಿಸಿದರು.
ತಾಲೂಕು ಕಚೇರಿಯಲ್ಲಿ ಡೆಂಘೀ ನಿಯಂತ್ರದ ಬಗ್ಗೆ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯ ತರೀಕೆರೆಯಲ್ಲಿ ಈಗಾಗಲೇ ಡೆಂಘೀಯಿಂದ ಇಬ್ಬರು ಮೃತಪಟ್ಟಿದ್ದಾರೆ. ಪಕ್ಕದ ಶಿವಮೊಗ್ಗ ಜಿಲ್ಲೆಯಲ್ಲೂ ಡೆಂಘೀ ವ್ಯಾಪಕವಾಗಿ ಹರಡುತ್ತಿದೆ. ನರಸಿಂಹರಾಜಪುರ ಮತ್ತು ಶಿವಮೊಗ್ಗಕ್ಕೆ ಹತ್ತಿರವಿರುವುದರಿಂದ ಈ ಭಾಗದಿಂದ ಶಿವಮೊಗ್ಗಕ್ಕೆ ಹೋಗಿ ಬರುವುವರ ಸಂಖ್ಯೆ ಜಾಸ್ತಿ ಇದೆ. ಅಲ್ಲಿಂದ ಡೆಂಘೀ ಹರಡುವ ಸಾಧ್ಯತೆ ಇರುವುದರಿಂದ ನರಸಿಂಹರಾಜಪುರ ತಾಲೂಕಿನವರು ಮುಂಜಾಗ್ರತೆ ಕ್ರಮ ವಹಿಸುವುದು ಅಗತ್ಯ ಎಂದರು.
ನೀರು ನಿಲ್ಲದಂತೆ ಜಾಗ್ರತೆ ವಹಿಸಿ: ಸೊಳ್ಳೆಗಳಿಂದ ಡೆಂಘೀ ಹರಡುವುದರಿಂದ ಪರಿಸರದ ಸ್ವಚ್ಛತೆ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಮನೆಯ ಸುತ್ತ ಇರುವ ನೀರಿನ ತೊಟ್ಟಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಬ್ಯಾರೆಲ್, ನೀರಿನ ತೊಟ್ಟಿಯ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ ನಂತರ ನೀರನ್ನು ತುಂಬಿಸಬೇಕು. ಮನೆಯ ಸುತ್ತ ಇರುವ ತೆಂಗಿನ ಚಿಪ್ಪು, ಟೈರುಗಳಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡು ತಮ್ಮ ಸಂತಾನವನ್ನು ಹೆಚ್ಚಿಸಿಕೊಳ್ಳುತ್ತದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಎಲ್ಲ ನಾಗರಿಕರು ತಮ್ಮ ಮನೆಯ ಸುತ್ತ, ಮುತ್ತ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದರು.
ಲಾರ್ವಾ ತಂಡ ರಚನೆ: ಈಗಾಗಲೇ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಗಳ ನೇತೃತ್ವದಲ್ಲಿ ಲಾರ್ವಾ ತಂಡ ರಚಿಸಲಾಗಿದೆ. ಈ ತಂಡದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ದಾದಿಯರು ಸಹಕಾರ ನೀಡಲಿದ್ದಾರೆ.
ಲಾರ್ವಾ ಸಮೀಕ್ಷಾ ತಂಡವು ಜನರಿಗೆ ಸಾಂಕ್ರಾಮಿಕ ರೋಗದ ಬಗ್ಗೆ ಅರಿವು ಮೂಡಿಸುತ್ತದೆ. ಗ್ರಾಮ ಪಂಚಾಯ್ತಿಗಳಲ್ಲಿ ಡೆಂಘೀ ಬಗ್ಗೆ ಅರಿವು ಮೂಡಿಸಲು ಕರಪತ್ರ ಹಂಚುವುದು, ಗ್ರಾಮ ಸಭೆಗಳಲ್ಲಿ ಮಾಹಿತಿ ನೀಡುವುದು ಮಾಡಿದರೆ ಜನರಿಗೆ ಅರಿವು ಮೂಡುತ್ತದೆ. ಶಾಲೆಗಳಲ್ಲೂ ಮಕ್ಕಳಿಗೆ ಅರಿವು ಮೂಡಿಸಬೇಕು. ಮಕ್ಕಳಿಂದ ಜಾಥಾ ಏರ್ಪಡಿಸಿ ಎಂದು ಹೇಳಿದರು.
ಔಷಧ ಸಿಂಪಡಿಸಿ: ಪಟ್ಟಣ ಪಂಚಾಯ್ತಿವರು ತಮ್ಮ ವ್ಯಾಪ್ತಿಯ ಚರಂಡಿ ಮತ್ತು ಇತರೆ ಕೊಳಚೆ ಪ್ರದೇಶಗಳಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಔಷಧ ಸಿಂಪರಣೆ ಮಾಡುವಂತೆ ಸೂಚಿಸಲಾಗಿದೆ ಎಂದರು.ಸಭೆಯಲ್ಲಿ ತಹಸೀ ಲ್ದಾರ್ ಕೃಷ್ಣಮೂರ್ತಿ, ತಾಪಂ ಸಿಇಒ ವಿಜಯಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ನಾಗೇಂದ್ರ, ಸಿಡಿಪಿಓ ಜ್ಯೋತಿ ಲಕ್ಷ್ಮಿ, ವೈದ್ಯಾಧಿಕಾರಿ ಡಾ. ಪ್ರೀತಿ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಕ ಪಿ. ಪ್ರಭಾಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement