'ಬಿಜೆಪಿ ದೃಢಗೊಳಿಸುವ ಸಂಕಲ್ಪ ಮಾಡೋಣ'
ಕ.ಪ್ರ.ವಾರ್ತೆ ಕಡೂರು ಜೂ.8 ವಿಧಾನಸಭಾ ಚುನಾವಣೆಯ ಸೋಲುಂಟಾಯಿತು ಎಂದು ಕೊರಗುವುದಕ್ಕಿಂತ ಮುಂದಿನ ದಿನಗಳಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಕ್ಷೇತ್ರಾದ್ಯಂತ ಸುತ್ತಿ, ಮತ್ತೆ ಬಿಜೆಪಿಯನ್ನು ಸದೃಢವಾಗಿ ಕಟ್ಟುವ ಮೂಲಕ ಪಕ್ಷದ ಗೆಲುವಿಗೆ ದೃಢ ಸಂಕಲ್ಪ ಮಾಡೋಣ ಎಂದು ಬೀರೂರು ದೇವರಾಜು ಹೇಳಿದರು.
ಅವರು ಕಡೂರು ಪಟ್ಟಣದ ಬನಶಂಕರಿ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಚಿಂತನ ಮಂಥನ ಸಭೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಮಹಾಭಾರತ ಮತ್ತು ರಾಮಾಯಣ ಮಹಾಕಾವ್ಯಗಳಲ್ಲಿಯೇ ಸೋಲು, ಗೆಲವು ಸಾಮಾನ್ಯವಾಗಿರುವಾಗ ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಹಜವಾಗಿದೆ ಎಂದು ವಿಶ್ಲೇಷಿಸಿದರು.
ಸಮಾನವಾಗಿ ಸ್ವೀಕಾರ: 1999ರಿಂದಲೂ ಚುನಾವಣೆ ಎದುರಿಸಿರುವ ನಾನು ಇದನ್ನು ಸಮಾನವಾಗಿ ಸ್ವೀಕರಿಸುತ್ತೇನೆ. ಇದೀಗ ಸೋಲಿನ ಕುರಿತು ಆರೋಪ, ಪ್ರತ್ಯಾರೋಪ ಮಾಡುವುದಕ್ಕಿಂತ ಮುಂದಿನ ದಿನಗಳಲ್ಲಿ ಕಡೂರು ವಿಧಾಸನಭಾ ಕ್ಷೇತ್ರ ಸುತ್ತುವ ಮೂಲಕ ಬಿಜೆಪಿಯನ್ನು ಬಲಿಷ್ಠವಾಗಿ ಕಟ್ಟೋಣ ಎಂದರು.
ಮಾಜಿ ಶಾಸಕ ಡಾ ವೈ.ಸಿ. ವಿಶ್ವನಾಥ್ ಮಾತನಾಡಿ, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜನಾಭಿವೃದ್ಧಿಗಾಗಿ ಕೈಗೊಳ್ಳುವ ತೀರ್ಮಾನಗಳನ್ನು ಸ್ವಾಗತಿಸಿ, ಜನ ವಿರೋಧಿ ನೀತಿಯನ್ನು ಪ್ರತಿಭಟಿಸೋಣ. ಆ ಮೂಲಕ ಮುಂದೆ ಬಿಜೆಪಿಯನ್ನು ಬಲಿಷ್ಠವಾಗಿ ಕಟ್ಟುವ ಸಂಕಲ್ಪ ಮಾಡೋಣ ಎಂದರು.
ಸಭೆ ಉದ್ಘಾಟಿಸಿದ ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣದ ಜೊತೆ ಗ್ರಾಪಂ, ತಾಪಂ ಮತ್ತು ಜಿಪಂಗಳಲ್ಲೂ ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ಪಕ್ಷವನು ಬಲವಾಗಿ ಕಟ್ಟಲು ಪ್ರತೀ ಶಕ್ತಿ ಕೇಂದ್ರ, ಹೋಬಳಿ ಮಟ್ಟ ಮತ್ತು ಬೂತ್ ಮಟ್ಟದ ಕಾರ್ಯಕರ್ತರಿಂದ ಪಕ್ಷವನ್ನು ಕಡೂರು ಕ್ಷೇತ್ರದಲ್ಲಿ ಸದೃಢವಾಗಿ ಕಟ್ಟಲು ಶ್ರಮಿಸಬೇಕು ಎಂದರು.
ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಅರೇಕಲ್ ಪ್ರಕಾಶ್ ಮಾತನಾಡಿದರು. ಮುಖಂಡ ಶಶಿಶಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಪ್ರಾಣೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ್, ಸೋಮಪ್ರಸಾದ್, ರಾಘವೇಂದ್ರ ಮುಖಂಡರಾದ ಗೀರೀಶ್, ಶ್ರೀನಿವಾಸ್, ಜಿಪಂ ಸದಸ್ಯ ಕಲ್ಮರುಡಪ್ಪ, ಪದ್ಮಾ ಚಂದ್ರಪ್ಪ, ಶಶಿರೇಖಾ ಸುರೇಶ್, ಮಾಜಿ ತಾಪಂ ಅಧ್ಯಕ್ಷೆ ರತ್ನ, ಗಣೇಶ ರಾವ್, ತಾ.ಬಿಜೆಪಿ ಉಪಾಧ್ಯಕ್ಷ ಮಣಿ, ಮಂಜುನಾಥ್ ಇದ್ದರು.