ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಾಲುಮರಗಳ ಕಡಿತಲೆ: ಗ್ರಾಮಸ್ಥರ ಪ್ರತಿಭಟನೆ

Mainashree
Updated On : 9 Jun 2013, 11:01 am

ಕ.ಪ್ರ.ವಾರ್ತೆ ಚಿಕ್ಕಮಗಳೂರು  ಜೂ.8
ಅನುಮತಿ ಪಡೆಯದೆ ಶಾಲಾ ಆವರಣದಲ್ಲಿದ್ದ ಸಾಲುಮರಗಳನ್ನು ವಿಶ್ವ ಪರಿಸರ ದಿನಾಚರಣೆ ದಿನದಂದು ಕಡಿತಲೆ ಮಾಡಿದ ಮುಖ್ಯ ಶಿಕ್ಷಕರ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಕ್ರಮ ಖಂಡಿಸಿ ಕಡೂರು ತಾಲೂಕು ಸಖರಾಯಪಟ್ಟಣದ ಗುಬ್ಬೆಹಳ್ಳಿ ಗ್ರಾಮಸ್ಥರು ಶಾಲಾವರಣದಲ್ಲಿ ಪ್ರತಿಭಟನೆ ನಡೆಸಿದರು.
ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ಹಳೆ ವಿದ್ಯಾರ್ಥಿಗಳು ನೆಟ್ಟು ಬೆಳೆಸಿದ್ದ ಬೆಲೆಬಾಳುವ ಮರಗಳನ್ನು ಮುಖ್ಯ ಶಿಕ್ಷಕ ಬಸವರಾಜಪ್ಪ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಟರಾಜ್ ಸೇರಿಕೊಂಡು ಕಡಿದು ಹಾಕಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಮುಖ್ಯ ಶಿಕ್ಷಕರನ್ನು ಅಮಾನತುಪಡಿಸಬೇಕು ಎಂದು ಆಗ್ರಹಿಸಿದರು.
ಅನುಮತಿ ಪಡೆದಿಲ್ಲ: ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಂದ ಯಾವುದೇ ಅನುಮತಿ ಪಡೆಯದೆ ಶಾಲಾ ಆವರಣದಲ್ಲಿದ್ದ ಬೀಟೆ, ಹೊಂಗೆ, ಬನ್ನಿ, ನೇರಳೆ, ಅಕೇಶಿಯಾ ಸೇರಿದಂತೆ ವಿವಿಧ ಜಾತಿಯ ಬೆಲೆಬಾಳುವ ಮರಗಳನ್ನು ಕಡಿಯಲಾಗಿದೆ, ಮಕ್ಕಳಲ್ಲಿ ಪರಿಸರದ ಬಗ್ಗೆ ವಿಶೇಷ ಅರಿವು ಮೂಡಿಸಬೇಕಾಗಿದ್ದ ವಿಶ್ವ ಪರಿಸರ ದಿನಾಚರಣೆ ದಿನದಂದೆ  ಮುಖ್ಯೋಪಾಧ್ಯಾಯರು ಶಾಲೆಯಲ್ಲಿ ಮರಗಳ ಕಡಿಯಲಾಗಿದೆ ಎಂದರು.
ಈ ಮಾರಣಹೋಮ ನಡೆಸಿರುವುದು ಅಕ್ಷಮ್ಯ ಅಪರಾಧ, ಶಾಲೆಯ ಸುತ್ತ ಕಾಂಪೌಂಡ್ ನಿರ್ಮಾಣಕ್ಕೆ ಇತ್ತಿಚೇಗಷ್ಟೆ ಹಣ ಬಿಡುಗಡೆಯಾಗಿದ್ದು, ಕಾಂಪೌಂಡ್ ನಿರ್ಮಾಣದ ನೆಪದಲ್ಲಿ ಸುಮಾರು 50ಕ್ಕೂ ಅಧಿಕ ಬೆಲೆಬಾಳುವ ಮರಗಳನ್ನು ಕಡಿತಲೆ ಮಾಡಲಾಗಿದೆ, ಅಲ್ಲದೆ ಮರಗಳನ್ನು ಉರುಳಿಸುವ ಸಮಯದಲ್ಲಿ ಶಾಲೆಯ ಬಿಸಿಯೂಟದ ಕೊಠಡಿಯೊಂದರ ಗೋಡೆ ಸಹ ಬಿರುಕು ಬಿಟ್ಟಿದ್ದು, ಹಾನಿ ಸಂಭವಿಸಿದೆ ಎಂದು ಪ್ರತಿಭಟನಾ ನಿರತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಬೇಜವಾಬ್ದಾರಿ: ಮರಗಳ ಮಾರಣಹೋಮ ಮಾಡುವ ಮೂಲಕ ಬೇಜವಾಬ್ದಾರಿತನ ಪ್ರದರ್ಶಿಸಿ, ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಮುಖ್ಯ ಶಿಕ್ಷಕ ಬಸವರಾಜಪ್ಪರನ್ನು ಕರ್ತವ್ಯದಿಂದ ಅಮಾನತು ಪಡಿಸಬೇಕು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಥಳಕ್ಕಾಗಮಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಸ್ಥಳಕ್ಕಾಗಮಿಸಿ ಮಾತನಾಡಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪರಿಸರ ದಿನಾಚರಣೆ ದಿನದಂದು ಎಲ್ಲಾ ಶಾಲೆಗಳಲ್ಲಿ ಗಿಡ ನೆಟ್ಟು ಪರಿಸರ ಸಂರಕ್ಷಿಸಿದರೆ, ಈ ಶಾಲೆಯಲ್ಲಿ ಮರಗಳ ಕಡಿತಲೆ ಮಾಡಿರುವ ಘಟನೆ ನಡೆದಿರುವುದು ಸರಿಯಲ್ಲ, ಈ ಬಗ್ಗೆ ಪರಿಶೀಲನೆ ನಡೆಸಿ  ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಹಸಿರುಸೇನೆ ಜಿಲ್ಲಾಧ್ಯಕ್ಷ ಹೆಚ್.ಕೆ. ಶಶಿಧರ್, ಗ್ರಾಮಸ್ಥರಾದ ಮಧು, ಬಿ.ಹೆಚ್. ಶಶಿಧರ್, ಕೆ. ಮಂಜಣ್ಣನಾಯ್ಕ್, ಜಿ.ಬಿ. ನಂಜುಂಡಪ್ಪ, ಹುಲಿಯಪ್ಪ, ಗಂಗಾಧರ, ರವಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement