ಸುದ್ದಿ ಸಂಕ್ಷೇಪ
ಇಂದು ಕಾಂಗ್ರೆಸ್ ಕೃತಜ್ಞತಾ ಸಭೆ
ತರೀಕೆರೆ: ಬ್ಲಾಕ್ ಕಾಂಗ್ರೆಸ್ ಸಮಿತಿ ತರೀಕೆರೆ ವತಿಯಿಂದ ಜೂ.9ರಂದು ಬೆಳಗ್ಗೆ 11.30ಕ್ಕೆ ರೈತ ಭವನದಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಜಯಗಳಿಸಲು ಕಾರಣರಾದ ತಾಲೂಕಿನ ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ಕೃತಜ್ಞತಾ ಸಭೆ ಹಾಗೂ ನೂತನ ಶಾಸಕ ಜಿ.ಎಚ್. ಶ್ರೀನಿವಾಸ್ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.
ಸಂಸದ ಕೆ. ಜಯಪ್ರಕಾಶ್ ಹೆಗಡೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಲ್. ಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಕಾಂಗ್ರೆಸ್ ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಚರಂಡಿಗೆ ಬಿದ್ದ ಕರು; ಪಾರು ಮಾಡಿದ ಅಗ್ನಿ ಶಾಮಕ ದಳ
ಮೂಡಿಗೆರೆ: ಮಳೆಯಿಂದ ರಕ್ಷಿಸಿಕೊಳ್ಳಲು ಹೋಗುತ್ತಿದ್ದ ಕರು 10 ಅಡಿ ಆಳದ ಚರಂಡಿಗೆ ಬಿದ್ದಿದ್ದು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಾಯದಿಂದ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಶನಿವಾರ ಬೆಳಗ್ಗೆ ವರುಣನ ಆರ್ಭಟ ಜೋರಾಗಿದ್ದು, ಕೆ.ಎಂ. ರಸ್ತೆಯ ಅಯ್ಯಪ್ಪ ಟವರ್ಸ್ ಮುಂಬಾಗದಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ಕರು ಕತ್ತಲೆಯಲ್ಲಿ ಜಿಗಿದ ಪರಿಣಾಮ 10 ಅಡಿ ಆಳದ ಚರಂಡಿಗೆ ಬಿದ್ದು ರೋದಿಸುತಿತ್ತು.
ಪಕ್ಕದಲ್ಲೇ ಇರುವ ಬೇಕರಿ ಮಾಲೀಕರು ಬಾಗಿಲು ತರೆಯಲು ಬಂದಾಗ ಕರುವಿನ ರೋದನ ಕೇಳಿಸಿ ತಕ್ಷಣ ಮಾಲೀಕರು ಅಗ್ನಿಶಾಮಕ ದಳಕ್ಕೆ ತಿಳಿಸಿದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸಾರ್ವಜನಿಕರ ಸಹಾಯದಿಂದ ಕರುವನ್ನು ಮೇಲೆತ್ತಲಾಯಿತು.
ಗಾರೆ ಕೆಲಸದವರಿಗೆ ಪರಿಕರ ವಿತರಣೆ
ನರಸಿಂಹರಾಜಪುರ: ಕೈಗಾರಿಕೆ ಇಲಾಖೆ ಹಾಗೂ ತಾಲೂಕು ಪಂಚಾಯ್ತಿಯಿಂದ ಗ್ರಾಮೀಣ ಕುಶಲಕರ್ಮಿ ಯೋಜನೆಯಡಿ ಹತ್ತು ಫಲಾನುಭವಿಗಳಿಗೆ ಗಾರೆ ಕೆಲಸ ಹಾಗೂ ಮರ ಕೆಲಸ ಮಾಡುವ ವಿವಿಧ ಪರಿಕರಗಳನ್ನು ತಾಲೂಕು ಪಂಚಾಯ್ತಿ ಆವರಣದಲ್ಲಿ ಶುಕ್ರವಾರ ವಿತರಿಸಲಾಯಿತು.
ಗಾರೆ ಕೆಲಸಕ್ಕೆ ಉಪಯೋಗಿಸುವ ಮಟ್ಟಗೋಲು, ಕರ್ನೆ, ಮರ ಕೆಲಸಕ್ಕೆ ಉಪಯೋಗಿಸುವ ಗರಗಸ ಸೇರಿದಂತೆ ವಿವಿಧ ಉಪಕರಣಗಳನ್ನು ತಾಪಂ ಅಧ್ಯಕ್ಷ ಜೆ.ಜಿ. ನಾಗರಾಜ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಆದಿಲ್, ಸುಜಾತ ಫಲಾನುಭವಿಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್, ತಾಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್, ತಾಲೂಕು ಪಂಚಾಯ್ತಿ ಸದಸ್ಯರು ಉಪಸ್ಥಿತರಿದ್ದರು.
ಇಂದು ಸಂವಾದ ಕಾರ್ಯಕ್ರಮ
ಚಿಕ್ಕಮಗಳೂರು: ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಆಶ್ರಯದಲ್ಲಿ ಭಾನುವಾರ ಬೆಳಿಗ್ಗೆ 10.30ಕ್ಕೆ ನಗರದ ಸಂತ ಜೋಸೆಫ್ ಪದವಿ ಪೂರ್ವ ಕಾಲೇಜಿನಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ್ ಕಂಬಾರರೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕವಿ ಡಾ. ಹೆಚ್.ಎಸ್. ವೆಂಕಟೇಶಮೂರ್ತಿ ನಡೆಸಿಕೊಡಲಿದ್ದು, ಮುಖ್ಯ ಅತಿಥಿಗಳಾಗಿ ಕವಿ ಬಿ.ಆರ್. ಲಕ್ಷ್ಮಣರಾವ್, ಗಾಯಕ ಯಶವಂತ್ ಹಳಿಬಂಡಿ, ಕಸಾಪ ಜಿಲ್ಲಾ ಅಧ್ಯಕ್ಷ ಎನ್.ಎಸ್. ಶಿವಸ್ವಾಮಿ, ಹಿರಿಯ ಪತ್ರಕರ್ತ ಗಿರಿಜಾಶಂಕರ್, ಸಂತ ಜೋಸೆಫ ಪದವಿ ಕಾಲೇಜಿನ ಪ್ರಾಂಶುಪಾಲ ಮಿನಿಥೋಮಸ್ ಭಾಗವಹಿಸಲಿದ್ದಾರೆ ಎಂದು ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಎಸ್.ಎಸ್. ವೆಂಕಟೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಆರೋಗ್ಯ ಸೇವೆಯೇ ನಮ್ಮ ಉದ್ದೇಶ'
ಶೃಂಗೇರಿ: ಸಮುದಾಯದ ಆರೋಗ್ಯ ಸೇವೆಯೇ ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಮಣಿಪಾಲ್ ಕಸ್ತೂರಿ ಬಾ ಆಸ್ಪತ್ರೆಯ ಮಾರ್ಕೇಟಿಂಗ್ ಅಧಿಕಾರಿ ಅನಿಲ್ ಪಾಲ್ ಜೇಕಬ್ ತಿಳಿಸಿದರು.
ಅವರು ಪಟ್ಟಣದ ಅದ್ವೈತ ಲ್ಯಾನ್ಸರ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಣಿಪಾಲ್ ಹೆಲ್ತ್ ಕಾರ್ಡ್ ಮಾಹಿತಿ ಕುರಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸ್ಥಳೀಯರು ಹೆಲ್ತ್ ಕಾರ್ಡ್ ಮಾಡಿಸಲು ಹಾಗೂ ಮಾಹಿತಿ ಪಡೆಯಲು ಪ್ರಕಾಶ್ ಭಟ್ 9449620493 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಜನ ಸಾಮಾನ್ಯರು ಈ ಕಾರ್ಡ್ ಮಾಡಿಸಿಕೊಂಡು ಸದುಪಯೋಗಪಡಿಸಿಕೊಳಅಳಬೇಕು ಎಂದರು. ಪ್ರಕಾಶ್ ಭಟ್ ಪ್ರಸ್ತಾವಿಕವಾಗಿ ಮಾತನಾಡಿದರು.