ಉತ್ತಮ ಮಳೆ; ರೈತರ ಮುಖದಲ್ಲಿ ಸಂತಸ
ಕ.ಪ್ರ.ವಾರ್ತೆ, ಕಡೂರು, ಜೂ.9
ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬಿತ್ತಿರುವ ಬೆಳೆಗಳು ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ.
ಹಲವು ದಿನಗಳಿಂದ ಮಳೆ ಬರುತ್ತಿದ್ದು, ರೈತರು ಬಿತ್ತನೆಯಲ್ಲಿ ತೊಡಗಿದ್ದಾರೆ. ಈಗಾಗಲೇ ಮೆಕ್ಕೆಜೋಳ ಮತ್ತಿತರ ಬೆಳೆ ಬಿತ್ತನೆ ಮಾಡಿರುವ ರೈತರಿಗೆ ಸಕಾಲಕ್ಕೆ ಮಳೆ ಸಿಕ್ಕಿರುವುದರಿಂದ ಸಂತಸಗೊಂಡಿದ್ದಾರೆ. ತಾಲೂಕಿನ ಸುಮಾರು 9,500 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಶೇಂಗಾ, ಉದ್ದು, ಹೆಸರು, ಸೂರ್ಯಕಾಂತಿ, ಎಳ್ಳು, ಅಲಸಂದೆ, ಹೈಬ್ರಿಡ್ ಜೋಳ, ತೊಗರಿ ಸೇರಿದಂತೆ ಇತರೆ ಬೆಳೆ ಬಿತ್ತನೆಯಾಗಿದೆ.
ತಾಲೂಕಿನ ಸಹಾಯಕ ತೋಟಗಾರಿಕಾ ನಿರ್ದೇಶಕ ಶಿವಣ್ಣ, ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಬೀಜ, ಔಷಧಿಗಳ ವಿತರಣೆ ಮತ್ತು ಸಹಕಾರಿ ಸಂಘಗಳಿಂದ ಗೊಬ್ಬರ ವ್ಯವಸ್ಥಿತವಾಗಿ ವಿತರಣೆಯಾಗುತ್ತಿದೆ.
ರೈತರಿಗೆ ಯಾವುದೇ ರೀತಿಯ ತೊಂದರೆಯಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿಯೂ ಎಲ್ಲ ರೀತಿಯ ಬೀಜ, ಔಷಧಿ ವಿತರಣೆ ಮಾಡಲಾಗುತ್ತಿದೆ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಲೋಕನಾಥ್ ತಿಳಿಸಿದ್ದಾರೆ.