ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಒತ್ತುವರಿ ತೆರವು: ಮಲೆನಾಡಿನಲ್ಲಿ ಹೆಚ್ಚಿದ ಆತಂಕ

Lingaraj Badiger
Updated On : 10 Jun 2013, 11:21 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು,  ಜೂ.9
ಅರಣ್ಯ ಮತ್ತು ಕಂದಾಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಜಿಲ್ಲೆಯ ಮಲೆನಾಡು ಭಾಗದ ಬೆಳೆಗಾರರ ಹಾಗೂ ರೈತರ ನಿದ್ದೆಗೆಡಿಸಿದೆ.
ಕಳೆದ ಒಂದು ವಾರದಿಂದ ಅರಣ್ಯ ಒತ್ತುವರಿಯನ್ನು ತೆರವುಗೊಳಿಸಲಾಗುತ್ತಿದೆ. ಇನ್ನು ಕೆಲವೆಡೆ ಅರಣ್ಯ ಭೂಮಿಯೊಳಗೆ ಬರದಂತೆ ಇಲಾಖೆಯವರು ಮುಳ್ಳಿನ ಬೇಲಿ ಹಾಕುತ್ತಿದ್ದಾರೆ. ಜಿಲ್ಲೆಯಾದ್ಯಂತ ಮಲೆನಾಡಿನಲ್ಲಿ ಈ ಪ್ರಕ್ರಿಯೆ ಮುಂದುವರೆದಿದ್ದು, ತಲಾತಲಾಂತರದಿಂದ ಕೃಷಿಯನ್ನೇ ನಂಬಿ ಬದುಕುತ್ತಿರುವ ಬಡ ರೈತರ ಬದುಕು ಬೀದಿ ಪಾಲಾಗುವ ಆತಂಕ ಎದುರಾಗಿದೆ.
ನ್ಯಾಯಾಂಗ ನಿಂದನೆ: ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಒತ್ತುವರಿ ತೆರವಿಗೆ ಚಾಲನೆ ನೀಡಿರುವುದು ಸಹಜವಾಗಿ ಪ್ರತಿಪಕ್ಷಗಳು ಟೀಕಿಸುತ್ತಿವೆ. ಒತ್ತುವರಿ ತೆರವು ಮಾಡದೇ ಹೋದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನ್ಯಾಯಾಲಯದ ನಿಂದನೆಗೆ ಗುರಿಯಾಗಬೇಕಾಗುತ್ತದೆ. ಇದರಿಂದ ಹೊರ ಬರಲು ಅನಿವಾರ್ಯವಾಗಿ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
55 ಸಾವಿರ ಎಕರೆ ಒತ್ತುವರಿ: ರಾಜ್ಯದಲ್ಲಿ ಕಂದಾಯ ಮತ್ತು ಅರಣ್ಯ ಭೂಮಿ ಒತ್ತುವರಿಯಾಗಿರುವ ಬಗ್ಗೆ ವರದಿ ನೀಡಲು ಬಾಲಸುಬ್ರಹ್ಮಣಂ ನೇತೃತ್ವದಲ್ಲಿ ರಾಜ್ಯ ಸರ್ಕಾರ ಸಮಿತಿಯನ್ನು ರಚನೆ ಮಾಡಿತ್ತು. ಈ ಸಮಿತಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ 55 ಸಾವಿರ ಎಕರೆ ಒತ್ತುವರಿಯಾಗಿದೆ ಎಂದು ವರದಿ ನೀಡಿತ್ತು.
ಈ ವರದಿಯ ಆಧಾರದ ಮೇಲೆ ಒತ್ತುವರಿಯನ್ನು ತೆರವುಗೊಳಿಸುವಂತೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಅದರಂತೆ ಏಕ ಕಾಲದಲ್ಲಿ ತಕ್ಷಣಕ್ಕೆ ಒತ್ತುವರಿ ತೆರವುಗೊಳಿಸಿದರೆ ಶಾಂತಿ ಮತ್ತು ಸುವ್ಯವಸ್ಥೆಗೆ ದಕ್ಕೆಯಾಗಲಿದೆ. ಅದುದರಿಂದ ಹಂತ ಹಂತವಾಗಿ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಸರ್ಕಾರ ಕೋರ್ಟ್‌ಗೆ ತಿಳಿಸಿತ್ತು. ಅದರ ಪ್ರಕಾರ ಪ್ರತಿ ತಿಂಗಳು ಒತ್ತುವರಿ ತೆರವುಗೊಳಿಸಿ ನ್ಯಾಯಾಲಯಕ್ಕೆ ವರದಿ ನೀಡಲಾಗುತ್ತಿದೆ.
ಕಾನೂನಿಗೆ ತಿದ್ದುಪಡಿ: ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ, ಬಿ.ಎಸ್. ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯ ಕಾಯ್ದೆ 192 (ಎ) ಕಾಯ್ದೆಗೆ ತಿದ್ದುಪಡಿ ತರಲಾಯಿತು.
ಕಾಯ್ದೆ ಮಾರ್ಪಾಡು: ಕಂದಾಯ, ಅರಣ್ಯ, ಗೋಮಾಳ ಭೂಮಿಯನ್ನು ಹೊಸದಾಗಿ ಒತ್ತುವರಿ ಮಾಡುವವರಿಗೆ ಶಿಕ್ಷೆ ಮತ್ತು ದಂಡ ವಿಧಿಸಲು ನಿರ್ಣಯ ಕೈಗೊಂಡು, ಅದರ ಅನುಮೋದನೆಗಾಗಿ ರಾಷ್ಟ್ರಪತಿಯವರಿಗೆ ಕಳುಹಿಸಿಕೊಡಲಾಗಿತ್ತು. ಇದರಲ್ಲಿ ಮುಜರಾಯಿ ಮತ್ತು ವಕ್ಫ್‌ಗೆ ಸೇರಿದ ಒತ್ತುವರಿಯನ್ನು ಸೇರ್ಪಡೆ ಮಾಡಬೇಕೆಂದು ಹೇಳಿ ರಾಷ್ಟ್ರಪತಿಯವರು ರಾಜ್ಯ ಸರ್ಕಾರ ಮಾಡಿದ್ದ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಕಳುಹಿಸಿದ್ದರು. ಡಿ.ವಿ. ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕಾಯ್ದೆಗೆ ಮಾರ್ಪಾಡು ಮಾಡಿ ರಾಷ್ಟ್ರಪತಿಯವರಿಗೆ ಮತ್ತೆ ಕಳುಹಿಸಲಾಗಿತ್ತು. ಅದಕ್ಕೆ ರಾಷ್ಟ್ರಪತಿಯವರು ಅಂಕಿತ ಹಾಕಿದರು.
ಅತಂತ್ರ: ಅರಣ್ಯ ಮತ್ತು ಕಂದಾಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ತಲಾ ತಲಾಂತರದಿಂದ ಸಾಗುವಳಿ ಮಾಡಿಕೊಂಡು ಹಲವು ಮಂದಿ ಬರುತ್ತಿದ್ದಾರೆ. ಇದೀಗ ಆ ಒತ್ತುವರಿ ಭೂಮಿಯನ್ನು ತೆರವುಗೊಳಿಸುತ್ತಿರುವುದು ಜನರನ್ನು ಅತಂತ್ರವನ್ನಾಗಿ ಮಾಡಲಾಗುತ್ತಿದೆ. ಇದಕ್ಕೆ ಎಲ್ಲೆಡೆ  ವಿರೋಧ ವ್ಯಕ್ತವಾಗುತ್ತಿದೆ.
ಇದರಿಂದ ತಕ್ಷಣಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ, ತಾತ್ಕಾಲಿಕ ಪರಿಹಾರವನ್ನು ಸರ್ಕಾರ ಕಂಡುಕೊಳ್ಳಲು ಅವಕಾಶ ಇದೆ. ಅರಣ್ಯ ಮತ್ತು ಕಂದಾಯ ಇಲಾಖೆಯವರು ಹಳೆಯ ದಾಖಲೆಯ ಆಧಾರದ ಮೇಲೆ ಒತ್ತುವರಿ ಪ್ರದೇಶವೆಂದು ಕೆಲವು ಭೂಮಿಯನ್ನು ಗುರುತು ಮಾಡಿದ್ದಾರೆ. ಇದಕ್ಕೆ ನಿಖರವಾದ ಮಾಹಿತಿ ಇಲ್ಲದಂತಾಗಿದೆ. ಅದುದರಿಂದ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಹೊಸದಾಗಿ ಸರ್ವೆ ಮಾಡಬೇಕು. ಆದರೆ, ಈ ಎರಡು ಇಲಾಖೆಗಳಲ್ಲಿ ಸರ್ವೇಯರ್‌ಗಳ ಕೊರತೆ ಇದೆ. ಈ ಹುದ್ದೆಗಳನ್ನು ತುಂಬುವ ಕೆಲಸ ಈವರೆಗೆ ಆಗಿಲ್ಲ. ಅದು, ಈಗಲಾದರೂ ಆಗಬೇಕಾಗಿದೆ.
ಅರಣ್ಯ ಮತ್ತು ಕಂದಾಯ ಭೂಮಿಯನ್ನು ತೆರವುಗೊಳಿಸುವುದರಿಂದ ಜೀವನಕ್ಕಾಗಿ ಅವಲಂಬಿತ ಸಣ್ಣ ಮತ್ತು ಅತಿ ಸಣ್ಣ ಬೆಳೆಗಾರರಿಗೆ ತೊಂದರೆಯಾಗಬಹುದು. ಅದನ್ನು ಸರ್ಕಾರ ಗಮನದಲ್ಲಿಟ್ಟು, ಈ ವಿಷಯವನ್ನು ಕೋರ್ಟ್‌ಗೆ ಮನವರಿಕೆ ಮಾಡುವ ಕೆಲಸ ರಾಜ್ಯ ಸರ್ಕಾರ  ಮಾಡಬೇಕು ಎಂದು ವಿಧಾನ ಪರಿಷತ್‌ನ ಮಾಜಿ ಸಭಾಪತಿ ಬಿ.ಎಲ್. ಶಂಕರ್ ಸಲಹೆ ನೀಡಿದ್ದಾರೆ.
ಒತ್ತುವರಿ ಮಾಡಿಕೊಂಡಿರುವ  5 ಎಕರೆವರೆಗಿನ ಪ್ರದೇಶವನ್ನು ಸಕ್ರಮಗೊಳಿಸಲು ರಾಜ್ಯ ಸರ್ಕಾರಕ್ಕೆ ಕಾನೂನಿನಲ್ಲಿ ಅವಕಾಶ ಇದೆ. ಅದೇ ರೀತಿ ಕೇಂದ್ರ ಸರ್ಕಾರ 10 ಎಕರೆವರೆಗಿನ ಭೂಮಿಯನ್ನು ಸಕ್ರಮಗೊಳಿಸಲು ಅರಣ್ಯ ಪರಾಂಪರಿಕ ಕಾಯ್ದೆಯನ್ನು ಜಾರಿಗೆ ತಂದಿದೆ. ಇವರೆಡು ಕಾಯ್ದೆಯನ್ನು ಬಳಸಿಕೊಂಡು ಸರ್ಕಾರ ಒತ್ತುವರಿ ತೆರವಿನಿಂದ ನಿರ್ಗತಿಕರಾಗುವವರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
-ಆರ್. ತಾರಾನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement