ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಡೆಂಘೀ ಪ್ರಕರಣ 27ಕ್ಕೆ ಏರಿಕೆ

Lingaraj Badiger
Updated On : 10 Jun 2013, 11:15 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.9
ಡೆಂಘೀ ಜ್ವರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಮೇ ಎರಡನೇ ವಾರದಲ್ಲಿದ್ದ 17 ಪ್ರಕರಣಗಳ ಸಂಖ್ಯೆ ಕೊನೆಯ ವಾರದಲ್ಲಿ 27ಕ್ಕೆ ಏರಿದೆ.
ತರೀಕೆರೆ ತಾಲೂಕಿನಲ್ಲಿ ಈವರೆಗೆ 10 ಪ್ರಕರಣಗಳು ಪತ್ತೆಯಾಗಿದ್ದು,  ಕಡೂರಿನಲ್ಲಿ 5, ಚಿಕ್ಕಮಗಳೂರಿನಲ್ಲಿ 8, ಕೊಪ್ಪದಲ್ಲಿ 3 ಹಾಗೂ ಎನ್.ಆರ್.ಪುರದಲ್ಲಿ 1 ಪ್ರಕರಣ ಪತ್ತೆಯಾಗಿದೆ.
ಜ್ವರದಿಂದ ಬಳಲುತ್ತಿದ್ದ 40 ಪ್ರಕರಣಗಳ ರಕ್ತಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 27 ಜನರಲ್ಲಿ ಡೆಂಘೀ ಜ್ವರ ಇರುವುದು ದೃಢಪಟ್ಟಿದೆ. ಆದ್ದರಿಂದ ಜಿಲ್ಲೆಯಾದ್ಯಂತ ಜನರಲ್ಲಿ ಆತಂಕ ಎದುರಾಗಿದೆ.
ಕಳೆದ ವರ್ಷ ಜನವರಿಯಿಂದ ಡಿಸೆಂಬರ್ ತಿಂಗಳವರೆಗೆ ಒಟ್ಟು 40 ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, ಪ್ರಸಕ್ತ ಸಾಲಿನಲ್ಲಿ ಜನವರಿಯಿಂದ ಮೇ ತಿಂಗಳವರೆಗೆ 27 ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿ ಗಮನಿಸಬೇಕಾದ ಆತಂಕದ ವಿಷಯವೆಂದರೆ ಕಳೆದ ವರ್ಷ ಇದೇ ಅವಧಿಯಲ್ಲಿ ಒಂದೂ ಪ್ರಕರಣವೂ ಪತ್ತೆಯಾಗಿರಲಿಲ್ಲ.
ಮುಂಜಾಗ್ರತೆ ವಹಿಸಿ: ಡೆಂಘೀ ಸಹಜವಾಗಿ ಕಾಣಿಸಿಕೊಳ್ಳುವುದು ಮಳೆಗಾಲದ ಆರಂಭದಲ್ಲಿ, ಆಗ ಬರುವ ಮಳೆಯ ನೀರು ಕೆಲ ದಿನಗಳ ಕಾಲ ಒಂದೆ ಕಡೆಯಲ್ಲಿ ಸಂಗ್ರಹವಾದರೆ ಸೊಳ್ಳೆಗಳು ಉತ್ಪತ್ತಿಯಾಗಿ ಅವುಗಳು ಕಚ್ಚಿದ ವ್ಯಕ್ತಿಗೆ ಈ ಜ್ವರ ಬರುತ್ತದೆ. ಈ ಜ್ವರದ ಬಗ್ಗೆ ಉಪೇಕ್ಷೆ ಮಾಡಿದರೆ ಸಾವು ಖಚಿತ. ಅದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವ ಜತೆಗೆ ಕೆಲವು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಬೇಕು.
ಡೆಂಘೀ ಜ್ವರ ಸಹಜವಾಗಿ ಬಯಲುಸೀಮೆಯಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತವೆ. ಆದರೆ, ಮಲೆನಾಡಿನಲ್ಲೂ ಇಂತಹ ಪ್ರಕರಣಗಳು ಕಂಡು ಬಂದಿವೆ. ಅದುದರಿಂದ ಜಿಲ್ಲೆಯಾದ್ಯಂತೆ ಎಚ್ಚರ ವಹಿಸಬೇಕಾಗಿದೆ.
ಡೆಂಘೀ ಬರದಂತೆ ಅಧಿಕಾರಿಗಳು ಹಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಗ್ರಾಮಾಂತರ ಮಟ್ಟದಲ್ಲಿ ಮಾತ್ರವಲ್ಲ ನಗರ ಪ್ರದೇಶಗಳಲ್ಲೂ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸೊಳ್ಳೆಗಳು ಉತ್ಪತ್ತಿಯಾಗುವ ಪ್ರದೇಶಗಳಲ್ಲಿ ಲಾರ್ವೆ ಸೊಳ್ಳೆ ತಿನ್ನುವ ಮೀನುಗಳನ್ನು ಆರೋಗ್ಯ ಇಲಾಖೆಯಿಂದ ಬಿಡಲಾಗುತ್ತಿದೆ. ಇದರಿಂದ ಈ ಸೊಳ್ಳೆಗಳ ಸಂಪೂರ್ಣ ನಿಯಂತ್ರಣ ಸಾಧ್ಯವಾಗುವುದಿಲ್ಲ. ಅದ್ದರಿಂದ ಸಾರ್ವಜನಿಕರು ಈ ಕೆಲಸಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಲಾಗಿದೆ.
ನೀರು ನಿಲ್ಲದಂತೆ ನೋಡಿಕೊಳ್ಳಿ: ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಇದರ ಜತೆಗೆ ಕುಡಿಯುವ ನೀರಿನ ತೊಟ್ಟಿಗಳಲ್ಲಿ ಅತಿ ಹೆಚ್ಚು ದಿನ ನೀರು ಸಂಗ್ರಹ ಮಾಡಿಕೊಳ್ಳಬಾರದು.
ನೀರಿನ ತೊಟ್ಟಿಯನ್ನು ಆಗಾಗ ಶುಚಿಗೊಳಿಸಬೇಕು. ಟೈರು, ಮತ್ತಿತರೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು.
ಈ ರೀತಿಯಲ್ಲಿ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡರೆ ಇದರಿಂದ ಇತರರಿಗೂ ಡೆಂಘೀ ಬರದಂತೆ ನೋಡಿಕೊಳ್ಳಲು ಅನುಕೂಲವಾಗಲಿದೆ ಎಂದು ಸೂಚನೆ ನೀಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement