ವಿಐಎಲ್ ಕಾರ್ಖಾನೆ ಸಮಸ್ಯೆ ಚರ್ಚಿಸಿ ಪರಿಹಾರ
ಕ.ಪ್ರ.ವಾರ್ತೆ, ತರೀಕೆರೆ, ಜೂನ್.9
ಮತದಾರರ ಮತ್ತು ಕಾರ್ಯಕರ್ತರ ಶ್ರಮದಿಂದ ಪಕ್ಷ ಗೆಲವು ಸಾಧಿಸಲು ಸಾಧ್ಯವಾಯಿತು ಎಂದು ಸಂಸದ ಜಯಪ್ರಕಾಶ್ ಹೆಗಡೆ ತಿಳಿಸಿದರು.
ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಭಾನುವಾರ ಪಟ್ಟಣದ ರೈತಭವನದಲ್ಲಿ ತಾಲೂಕಿನ ಮತದಾರರಿಗೆ, ಕಾರ್ಯಕರ್ತರಿಗೆ ಏರ್ಪಡಿಸಲಾಗಿದ್ದ ಕೃತಜ್ಞತಾ ಸಭೆ ಮತ್ತು ನೂತನ ಶಾಸಕ ಜಿ.ಎಚ್. ಶ್ರೀನಿವಾಸ್ ಅವರಿಗೆ ಅಭಿನಂದನಾ ಸಮಾರಂಭ ನೆರವೇರಿಸಿ ಮಾತನಾಡಿದರು.
ನೀರಿನ ಸಮಸ್ಯೆಗೆ ಪರಿಹಾರ: ಪಕ್ಷದ ಕಾರ್ಯಕರ್ತರು ಈ ಭಾಗದ ಸಮಸ್ಯೆಗಳನ್ನು ತಿಳಿಸಬೇಕು. ಪುರಸಭೆ ಕೂಡ ನಮ್ಮೊಂದಿಗಿದೆ ಎಲ್ಲರೂ ಒಗ್ಗಟ್ಟಾಗಿ ಹೋಗಬೇಕು, ಪುರಸಭೆ ಬಗ್ಗೆ ಕೂಡ ಹೆಚ್ಚು ಕಾಳಜಿ ಇದೆ. ಈ ಭಾಗದಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತುಂಬಾ ಇದೆ, ಭದ್ರಾ ನದಿಯಿಂದ ಕುಡಿಯುವ ನೀರು ಸರಬರಾಜಾಗಬೇಕು, ಶಾಶ್ವತ ನೀರಾವರಿ ಬಗ್ಗೆ ಸಂಸದರು ಶಾಸಕರು, ಜನಪ್ರತಿನಿಧಿಗಳನ್ನು ಒಳಗೊಂಡಂತೆ ಸಚಿವರ ಜೊತೆಗೂಡಿ ಸಭೆ ಏರ್ಪಾಡು ಮಾಡಿ ಚರ್ಚೆ ಮಾಡಲಾಗುವುದು ಎಂದರು.
ಕುಡ್ಲೂರು ಮತ್ತಿತರರ ಕಡೆಗಳಿಗೆ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಒದಗಿಸಲು ಪ್ರಯತ್ನ, ತೆಂಗು-ಅಡಕೆ ಸಮಸ್ಯೆ ಇದೆ, ಕೊಬ್ಬರಿಯಂತೆ ತೆಂಗಿಗೂ ಬೆಲೆ ನಿಗದಿಯಾಗಬೇಕು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಪಟ್ಟಣದ ವಿಐಎಲ್ ಕಾರ್ಖಾನೆ ಬಗ್ಗೆ ದಿನ ನಿಗದಿಮಾಡಿ ಸಮಸ್ಯೆ ಬಗ್ಗೆ ಚರ್ಚಿಸಿ ಪರಿಹಾರ ಹುಡುಕೋಣ ಎಂದು ಹೇಳಿದರು.
ನೂತನ ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ಜಂಬದಹಳ್ಳ ಯೋಜನೆ ಕಾಮಗಾರಿಗೆ ಶೀಘ್ರದಲ್ಲೇ ಗುದ್ದಲಿಪೂಜೆ ನೆರವೇರಿಸಲಾಗುವುದು. ಬುಕ್ಕಾಂಬುದಿ ಗಾಣಗಿತ್ತಿ ಹಳ್ಳ ಮತ್ತು ಲಿಂಗದಹಳ್ಳಿಯ ಭೀಮನಹಳ್ಳ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಲ್. ಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೂತನ ಶಾಸಕ ಜಿ.ಎಚ್. ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.
ಬಿಎಸ್‌ಆರ್ ಮಂಜುನಾಥ್, ಸಿ.ಆರ್. ಬಸವರಾಜ್, ಎಚ್.ಆರ್. ಚಂದ್ರಪ್ಪ, ಎಚ್.ಎನ್. ಮಂಜುನಾಥ್, ಸಿ.ಆರ್. ಬಸವರಾಜ್ ಮತ್ತಿತರರು ಮಾತನಾಡಿದರು.
ಪುರಸಭಾ ಮಾಜಿ ಅಧ್ಯಕ್ಷ ಟಿ.ಎನ್. ಗೋಪಿನಾಥ್, ಟಿ.ಎಸ್. ಧರ್ಮರಾಜ್, ಎಚ್.ಯು. ಫಾರೂಕ್, ಪುರಸಭಾ ಸದಸ್ಯರು, ಎಸ್. ತಿಪ್ಪೇರುದ್ರಯ್ಯ, ಕೆ.ಆರ್.ದ್ರುವಕುಮಾರ್, ಧೋರನಾಳು ಪರಮೇಶ್, ಮೋಹನ್‌ಕುಮಾರ್, ರಂಗಪ್ಪ, ಮಿರ್ಜಾ ಇಸ್ಮಾಯಿಲ್, ಪಕ್ಷದ ಕಾರ್ಯಕರ್ತರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಬಿಎಸ್‌ಆರ್ ಮಂಜುನಾಥ್ ಸ್ವಾಗತಿಸಿದರು. ರಾಮಚಂದ್ರಪ್ಪ ನಿರೂಪಿಸಿದರು.