ಹಳೆಯ ಮರಗಳ ತೆರವಿಗೆ ಆಗ್ರಹ
ಕ.ಪ್ರ.ವಾರ್ತೆ, ಮೂಡಿಗೆರೆ , ಜೂ.9
ಅಪಾಯದ ಅಂಚಿನಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ 2011-12 ರಲ್ಲಿ ಕಂದಾಯ ಉಪವಿಭಾಗಾಧಿಕಾರಿ ಆದೇಶ ನೀಡಿದ್ದರು. ಅಧಿಕಾರಿಗಳು ಆದೇಶವನ್ನು ಉಲ್ಲಂಘಿಸಿದ್ದರ ಪರಿಣಾಮ ಮರಗಳು ಉರುಳಿ ಲಕ್ಷಾಂತರ ರು ನಷ್ಟ ವಾಗಿರುವ ಪ್ರಕರಣ ಬೆಳಗೂಡಿನಿಂದ ವರದಿಯಾಗಿದೆ.
ಬೆಳೆಗಾರ ಬೆಳಗೋಡಿನ ಬಿ.ಡಿ. ರವಿ ಈ ಬಗ್ಗೆ ಮಾತನಾಡಿ, ತಾಲೂಕಿನ ಬಣಕಲ್ ಹೋಬಳಿಯ ಬೆಳಗೋಡು ಗ್ರಾಮದಲ್ಲಿ ತಮ್ಮ ಹಿಡುವಳಿ ಜಮೀನಿನ ಅಂಚಿನಲ್ಲಿ ಹಳೆಯ ಕಾಲದ ಮರಗಳಿವೆ.
ಯಾವುದೇ ಸಂದರ್ಭದಲ್ಲಿ ಬೀಳುವ ಸಂಭವವಿದೆ ಎಂದು ಅಧಿಕಾರಿಗಳಿಗೆ ಲಿಖಿತ ಮೂಲಕ ತಿಳಿಸಿದ್ದರ ಹಿನ್ನೆಲೆಯಲ್ಲಿ. ಅಧಿಕಾರಿಗಳು ಸಿಆರ್ಪಿಸಿ ಕಲಂ -133ರ ಅಧಿಕಾರದಡಿ ತಹಸೀಲ್ದಾರ್, ಅರಣ್ಯಾದಿಕಾರಿಗಳಿಗೆ ಹಾಗೂ ಪೊಲೀಸ್ ಉಪ ನಿರೀಕ್ಷರಿಗೆ ಅಪಾಯದ ಅಂಚಿನಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಆದೇಶವನ್ನು ನೀಡಿ ವರ್ಷಗಳೇ ಕಳೆದರು ಹಿರಿಯ ಅಧಿಕಾರಿಗಳ ಆದೇಶವನ್ನು ಪಾಲಿಸದೇ ನಿರ್ಲಕ್ಷಿಸಿದ ಪರಿಣಾಮ ಮರವೊಂದು ಮನೆಯ ಉಗ್ರಾಣದ ಮೇಲೆ ಉರುಳಿದ್ದು ಅಪಾರ ನಷ್ಟ ಸಂಭವಿಸಿದೆ. ಮತ್ತೊಂದು ಮರ ಭಾನುವಾರ ವಾಹನದ ಪಕ್ಕದಲ್ಲಿ ಉರುಳಿದ್ದರ ಪರಿಣಾಮ ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿಸಿದರು.
ತಮ್ಮ ಮನೆಯ ಸುತ್ತ ಮುತ್ತಲಿನಲ್ಲಿ ಕಾಡಾನೆಗಳ ಹಾವಳಿ ಅತಿಯಾಗಿದೆ, ಮನೆಯ ಮುಂಬಾಗದಲ್ಲಿ 2 ಮರಗಳು ಒಣಗಿ ನಿಂತಿದ್ದು, ಆನೆಗಳು ಮರಗಳನ್ನು ಎಳೆದಲ್ಲಿ ಅಥವಾ ಗಾಳಿ-ಮಳೆಗೆ ಯಾವಕ್ಷಣದಲ್ಲಾದರೂ ಮನೆಯ ಮೇಲೆ ಬೀಳುವ ಸಾಧ್ಯತೆಗಳಿದೆ. ಸಾವು ನೋವುಗಳು ಸಂಭವಿಸುವ ಸಾಧ್ಯತೆಗಳಿದ್ದು ಮರಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಮರಗಳು ಉರುಳಿ ಬಿದ್ದು ಅಪಾರ ಆಸ್ತಿ ಹಾಳಾಗುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಜೀವಹಾನಿ ಸಂಭವಿಸಿದಲ್ಲಿ ಕಂದಾಯ ಅಧಿಕಾರಿಗಳೇ ಕಾರಣರಾಗುತ್ತಾರೆ ಎಂದು ಆರೋಪಿಸಿದರು.